ಜಿಲ್ಲೆ

ಸಂಸತ್ತಿನಲ್ಲಿನ ಸ್ಮೋಕ್ ದಾಳಿ ಬಿಜೆಪಿಯ ಸಂಚು: ದಲಿತ ಸಂಘರ್ಷ ಸಮಿತಿ ಆರೋಪ

ಆರ್.ಕೃಷ್ಣ

ಮೈಸೂರು: ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಸ್ಮೋಕ್ ಬಾಂಬ್ ದಾಳಿ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ನಡೆಸಿರುವ ಸಂಚಾಗಿರಬಹುದು ಎಂದು ಎಂದು ದಲಿತ ಸಂಘರ್ಷ ಸಮಿತಿ ಅನುಮಾನ ವ್ಯಕ್ತಪಡಿಸಿದೆ.
ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಒಂದೊಂದು ಅಜೆಂಡಾ ಇರಿಸಿಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತದೆ. ಹಿಂದುತ್ವ, ರಾಮಮಂದಿರವನ್ನು ಈ ಹಿಂದೆ ಅಸ್ತ್ರ ಮಾಡಿಕೊಂಡಿತ್ತು. ಈಗ ಅದೇ ರೀತಿ ಸಂಸತ್ತಿನ ಸ್ಮೋಕ್ ದಾಳಿ ಹೊಸ ಪ್ರಯೋಗ ಮಾಡುತ್ತಿರಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯ ಸಂಸ್ಥಾಪಕ ಸಂಯೋಜಕ ವಿ.ನಾಗರಾಜ್, ಮುಖಂಡ ದೇವಗಳ್ಳಿ ಸೋಮಶೇಖರ್ ದೂರಿದರು.
ದಾಳಿಕೋರರಿಗೆ ಸಂಸದ ಪ್ರತಾಪ್‌ಸಿಂಹ ಪಾಸ್ ನೀಡಿದ್ದಾರೆ. ಆದ್ದರಿಂದ ಅವರನ್ನು ಸಂಸದರ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು. ಅಲ್ಲದೆ ಪ್ರಕರಣದ ಕೂಲಂಕಷ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕಾಂತರಾಜ ಆಯೋಗದ ವರದಿಯನ್ನು ಕೂಡಲೇ ಅಂಗೀಕರಿಸಬೇಕು. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಬದ್ಧತೆ ಪ್ರದರ್ಶಿಸಬೇಕು. ಈ ಮೂಲಕ ನೊಂದ, ತಳ ಸಮುದಾಯದ ಜನರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಕೆಲ ವರ್ಷಗಳಿಂದ ಸಂಘಟನೆಯಿಂದ ತಟಸ್ಥವಾಗಿ ಉಳಿದಿದ್ದದ ದೇವಗಳ್ಳಿ ಸೋಮಶೇಖರ್ ಇದೇ ವೇಳೆ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಸೇರ್ಪಡೆಗೊಂಡರು. ಮುಖಂಡರಾದ ಕಾರ್ಯ ಬಸವಣ್ಣ, ಹೆತ್ತೂರು ಅಣ್ಣಯ್ಯ, ಮುನಿರಾಜು, ಕೆ.ಎಂ. ನಾಗರಾಜು ಇದ್ದರು.