ರಾಯಚೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಫಾರಸು ಮಾಡಲಾಗಿದ್ದ ಎಸ್ಸಿ, ಎಸ್ಟಿ ಮೀಸಲಾಯಿ ಹೆಚ್ಚಳ ಮತ್ತು ಒಳ ಮೀಸಲಾತಿ ಜಾರಿ ಕುರಿತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡಿಸಬೇಕು ಎಂದು ಒತ್ತಾಯಿಸಿ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಮಹ್ಮದ್ ಆಸೀಫ್‌ಗೆ ಮನವಿ ಸಲ್ಲಿಸಲಾಯಿತು. ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ಗೆ ಸೇರಿಸಲು ಮತ್ತು ಒಳ ಮೀಸಲಾತಿ ಜಾರಿಗೆ ಸಂವಿಧಾನದ ಪರಿಚ್ಛೇದ 341(3) ತಿದ್ದುಪಡಿ ತರಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3 ರಿಂದ 7ಕ್ಕೆ ಹೆಚ್ಚಳ ಮಾಡಿದ್ದು, ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗುವುದರಿಂದ ಸಂವಿದಾನದ 9ನೇ ಶೆಡ್ಯೂಲ್‌ಗೆ ಸೇರಿಸಬೇಕು.
ಮಾಜಿ ಸಚಿವ ಜೆ.ಮಾಧುಸ್ವಾಮಿ ನೇತೃತ್ವದ ಸಮಿತಿ ವರದಿಯಂತೆ ಪರಿಶಿಷ್ಟ ಜಾತಿಗಳ ಮೀಸಲಾತಿ ವಿಂಗಡಿಸಿ ಒಳ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕೇಂದ್ರ ಸರ್ಕಾರ ಎರಡೂ ಬಿಲ್‌ಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.