ಪ್ರಮುಖ ಮುಖ್ಯಾಂಶಗಳು
ಮನೋಹರ್ ಬಳಂಜ ಬೆಳ್ತಂಗಡಿ
ತಾಲೂಕಿನ ಪ್ರಮುಖ ಪಟ್ಟಣ, ಹೆಸರಾಂತ ಶಿಕ್ಷಣ ಸಂಸ್ಥೆ, ಉದ್ಯಮಗಳನ್ನು ಹೊಂದಿರುವ ಉಜಿರೆ ಪೇಟೆಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಇನ್ನಷ್ಟು ಬಿಗಡಾಯಿಸಿದೆ.
ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ವಾಹನ ಸವಾರರಿಗೆ ಭಾರಿ ಸಮಸ್ಯೆಯಾಗಿದೆ. ಪ್ರಸ್ತುತ ಇಲ್ಲಿ ರಸ್ತೆಯಲ್ಲೇ ವಾಹನ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಉಜಿರೆಯಲ್ಲಿ ಪಾರ್ಕಿಂಗ್ ಸಮಸ್ಯೆ ಎಂಬುದು ಇಂದು ನಿನ್ನೆಯದಲ್ಲ. ಹಲವಾರು ವಷರ್ಗಳಿಂದಲೂ ಇದ್ದರೂ ಇದುವರೆಗೂ ಸೂಕ್ತ ಪರಿಹಾರ ಕಂಡುಕೊಂಡಿಲ್ಲ. ಹೆದ್ದಾರಿ ಕಾಮಗಾರಿ ಬಳಿಕವಾದರು ಪರಿಹಾರ ಸಿಗಬಹುದೇ ಅಥವಾ ಸಮಸ್ಯೆ ಇನ್ನಷ್ಟು ಹೆಚ್ಚಬಹುದೇ ಎಂಬ ಅನುಮಾನ ಕಾಡುತ್ತಿದೆ.
ತಾಲೂಕಿನ ಅತಿ ದೊಡ್ಡ ಗ್ರಾಪಂ, 20,000ಕ್ಕಿಂತಲೂ ಅಧಿಕ ಜನಸಂಖ್ಯೆ ಹೊಂದಿರುವ ಉಜಿರೆ ಪಟ್ಟಣ ಪಂಚಾಯಿತಿ ಆಗಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಧರ್ಮಸ್ಥಳ, ಚಾರ್ಮಾಡಿ, ಬೆಳ್ತಂಗಡಿ ಮೊದಲಾದ ಕಡೆಗಳಿಗೆ ಪ್ರಮುಖ ಸಂಪರ್ಕವಾಗಿರುವ ಉಜಿರೆಯಲ್ಲಿ ವಾಹನ ಪಾರ್ಕಿಂಗ್ ಮಾಡುವುದೆಂದರೆ ಅದು ಚಕ್ರವ್ಯೆಹ ಭೇದಿಸುವಷ್ಟು ಕಠಿಣವಾಗಿದೆ. ಗ್ರಾಮ ಸಭೆಯಲ್ಲಿ ಪ್ರತಿ ಬಾರಿಯೂ ಪಾರ್ಕಿಂಗ್ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಕೈಗೊಳ್ಳುವ ನಿರ್ಣಯಗಳು ಪುಸ್ತಕಕ್ಕೆ ಮಾತ್ರ ಸೀಮಿತಗೊಳ್ಳುತ್ತಿವೆಯೇ ಹೊರತು, ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾಗುತ್ತಿಲ್ಲ.
ಧರ್ಮಸ್ಥಳ ರಸ್ತೆಯಲ್ಲಿ ಪಾದಚಾರಿಗಳಿಗೆ ಫುಟ್‌ಪಾತ್ ನಿರ್ಮಾಣವಾಗಿದ್ದರೂ ಅದು ವಾಹನ ನಿಲುಗಡೆ ಸ್ಥಳವಾಗಿ ಮಾರ್ಪಟ್ಟಿದೆ. ಫುಟ್‌ಪಾತ್ ಅನ್ನು ರಸ್ತೆ ಅಂತರಕ್ಕೆ ಸಮಾನವಾಗಿ ಮಾಡಿರುವುದರಿಂದ ಬಾಡಿಗೆ ವಾಹನಗಳನ್ನು ಫುಟ್‌ಪಾತ್‌ನಲ್ಲೇ ನಿಲ್ಲಿಸಲಾಗುತ್ತಿದೆ. ಉಜಿರೆ ಅಂಗಡಿಗಳಿಗೆ ತೆರಳಬೇಕಾದರೆ ವಾಹನಗಳ ಮಧ್ಯೆ ನುಸುಳಿ ಸಾಗಬೇಕು. ಒಂದು ವೇಳೆ ಬಾಡಿಗೆ ವಾಹನಗಳ ಅ(ನ)ಧಿಕೃತ ಪಾರ್ಕಿಂಗ್ ಸ್ಥಳದಲ್ಲಿ ಜನಸಾಮಾನ್ಯರು ವಾಹನ ನಿಲ್ಲಿಸಿ ತೆರಳಿದರೆ ವಾಪಸು ಬರುವಾಗ ವಾಹನ ಹೊರಗೆ ತರಲು ಪ್ರಯಾಸ ಪಡಬೇಕು. ಇದೇ ಕಾರಣಕ್ಕೆ ಮಾತಿನಚಕಮಕಿ ಸರ್ವೇ ಸಾಮಾನ್ಯವಾಗಿದೆ.
ಉಜಿರೆಯಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಹಲವು ದಿನಗಳಿಂದ ಮುಂದುವರಿದಿದೆ. ಇದೀಗ ಗುರುವಾರ ಸಂಚಾರಿ ಪೊಲೀಸರು ಬೆಳಗಿನ ಹೊತ್ತು ಸುಗಮ ಸಂಚಾರದ ವ್ಯವಸ್ಥೆ ನಿರ್ವಹಿಸಿದರು. ಆದರೆ ಇದು ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಮುಂದುವರಿಯಬೇಕು ಎಂಬುದು ಸ್ಥಳೀಯರ ಹಾಗೂ ವಾಹನ ಸವಾರರ ಆಗ್ರಹವಾಗಿದೆ.
ಉಜಿರೆಯಲ್ಲಿ ಜನಸಾಮಾನ್ಯರಿಗೆ ಎಲ್ಲಿ ವಾಹನ ನಿಲ್ಲಿಸಬೇಕು ಎಂಬ ಗೊಂದಲ ಉಂಟಾಗಿದೆ. ಕಾಲೇಜು ರಸ್ತೆ ಒಂದು ಬದಿ ಪಾರ್ಕಿಂಗ್ ಇದ್ದರೂ ಬೆಳಗ್ಗೆ ನಿಲ್ಲಿಸಿದರೆ ತೆಗೆಯುವುದು ರಾತ್ರಿಯೇ. ಚಾರ್ಮಾಡಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲೆಲ್ಲೂ ನಿಲ್ಲಿಸಲು ಸ್ಥಳವೇ ಇಲ್ಲ. ಬಾಡಿಗೆ ವಾಹನದವರು ಪಾರ್ಕಿಂಗ್‌ಗೆ ಪರದಾಡುವ ಸ್ಥಿತಿ ಉಂಟಾಗಿದೆ. ಕೆಲವೊಮ್ಮೆ ರಸ್ತೆಯಲ್ಲೇ ನಿಲ್ಲಿಸಬೇಕಾಗಿದೆ. ಇಲ್ಲಿ ಸರಿಯಾದ ಬಸ್ ನಿಲ್ದಾಣದ ವ್ಯವಸ್ಥೆಯೂ ಇಲ್ಲದ ಕಾರಣ ಬಸ್‌ಗಳು ಅಲ್ಲಲ್ಲಿ ನಿಲ್ಲುವಾಗ ಸಾಕಷ್ಟು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.