ಬಂಟ್ವಾಳ: ಅಭಿವೃದ್ಧಿಯ ಪಥದಲ್ಲಿರುವ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಗಳಾದ ಬಂಟ್ವಾಳ, ಬಿ.ಸಿ.ರೋಡ್, ಮೆಲ್ಕಾರ್‌ನಲ್ಲಿ ಸರಿಯಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗುತ್ತಿದೆ.
ಬೇರೆ-ಬೇರೆ ಕೆಲಸಗಳಿಗೆ, ಕಚೇರಿಗಳಿಗೆ, ಸಾಮಗ್ರಿ ಖರೀದಿಗೆ ಅಂಗಡಿಗಳಿಗೆ ವಾಹನಗಳಲ್ಲಿ ನಗರಕ್ಕೆ ಬರುವ ಜನರಿಗೆ ವಾಹನ ಪಾರ್ಕಿಂಗ್ ಮಾಡುವುದೇ ದೊಡ್ಡ ಸವಾಲಾಗಿದೆ. ಹೆಚ್ಚಿನ ಅಂಗಡಿ, ಮಳಿಗೆಗಳಿಗೆ ತಮ್ಮದೆ ಪಾರ್ಕಿಂಗ್ ಜಾಗ ಇಲ್ಲದೆ ಇರುವುದರಿಂದ ಜಾಗ ಸಿಕ್ಕಲ್ಲಿ ವಾಹನ ನಿಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಸುಮಾರು 9 ವರ್ಷಗಳ ಹಿಂದೆ ಪ್ರೊಬೆಷನರಿ ಐಎಎಸ್ ಗಾರ್ಗಿ ಜೈನ್ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ವೇಳೆ ಸಭೆಗಳಲ್ಲಿ ಇಡೀ ಬಿ.ಸಿ.ರೋಡ್, ಬಂಟ್ವಾಳಕ್ಕೆ ಪಾರ್ಕಿಂಗ್ ಸಹಿತ ಆಡಳಿತಾತ್ಮಕ ಶಿಸ್ತು ತರುವ ಹಾಗೂ ಪಟ್ಟಣಕ್ಕೊಂದು ವ್ಯವಸ್ಥಿತ ಚೌಕಟ್ಟು ತರುವ ಕುರಿತು ಚರ್ಚೆಯಾಗಿತ್ತು. ಆದರೆ ಆ ಚರ್ಚೆ ಅನುಷ್ಠಾನಕ್ಕೆ ಬಾರದೆ ಸಭೆಯ ನಿರ್ಣಯ ಕಡತದಲ್ಲೇ ಉಳಿದಿದೆ.
ಬಿ.ಸಿ.ರೋಡ್ ಸಹಿತ ಬಂಟ್ವಾಳ ಪುರಸಭೆಯ ಸರ್ಕಾರಿ ಕಟ್ಟಡಗಳ ಹಾಗೂ ಖಾಸಗಿ ಕಾಂಪ್ಲೆಕ್ಸ್‌ಗಳ ತಳ ಅಂತಸ್ತಿನಲ್ಲಿ ಪಾರ್ಕಿಂಗ್ ಜಾಗವಿರುತ್ತಿದ್ದರೆ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತಿತ್ತು. ಕೆಎಸ್ಸಾರ್ಟಿಸಿ ಸಹಿತ ಹಲವು ಕಟ್ಟಡಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇದ್ದರೂ ಅದನ್ನು ಸದ್ಬಳಕೆ ಮಾಡುವತ್ತ ಆಡಳಿತ ಯೋಜನೆ ರೂಪಿಸಿಲ್ಲ. ಹೊಸತಾಗಿ ನಿರ್ಮಿಸಲಾದ ಬಹುಮಹಡಿ ಕಟ್ಟಡಗಳ ಎದುರು ವಾಹನ ನಿಲ್ಲುವುದಷ್ಟೇ ಅಲ್ಲ, ರಾಷ್ಟ್ರೀಯ ಹೆದ್ದಾರಿಯಲ್ಲೇ ವಾಹನಗಳು ನಿಲ್ಲುತ್ತಿರುವುದು ಕೆಲವೊಮ್ಮೆ ವಾಹನದಟ್ಟಣೆಗೂ ಕಾರಣವಾಗುತ್ತಿದೆ.
ಬಿ.ಸಿ.ರೋಡಿನ ಫ್ಲೈಓವರ್ ಕೆಳಗೆ ದ್ವಿಚಕ್ರ ವಾಹನಗಳು ಹಾಗೂ ಕಾರು, ಆಟೋಗಳು ನಿಲ್ಲುತ್ತಿವೆ. ಬಿ.ಸಿ.ರೋಡ್‌ನ ಕೈಕುಂಜಕ್ಕೆ ತೆರಳುವ ಮಾರ್ಗದಲ್ಲಿ ವ್ಯವಸ್ಥಿತ ಪಾರ್ಕಿಂಗ್ ನಿರ್ಮಿಸುವ ಸಾಧ್ಯತೆ ಕುರಿತು ತಜ್ಞರ ಸರ್ವೇಯನ್ನು 2016ರಲ್ಲೇ ನಡೆಸಲಾಗಿತ್ತು. ಅದು ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯಕ್ಕೆ ಪೊಲೀಸ್ ಸ್ಟೇಷನ್‌ಗೆ ಹೋಗುವ ದಾರಿ, ತಾಲೂಕು ಪಂಚಾಯಿತಿ ಬಳಿ ಹಾಗೂ ಜಾಗ ಸಿಕ್ಕಲ್ಲೆಲ್ಲಾ ಪಾರ್ಕಿಂಗ್ ಮಾಡಲಾಗುತ್ತಿದೆ. ಬಹುತೇಕ ಅಂಗಡಿ ಮಾಲೀಕರೇ ನೋ ಪಾರ್ಕಿಂಗ್ ಬೋರ್ಡ್ ತಗುಲಿಸಿದ್ದು, ಅಲ್ಲೂ ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದಾರೆ. ಕಳೆದ ಸಾಮಾನ್ಯಸಭೆಯಲ್ಲಿ ಕೈಕುಂಜೆಯ ಅನಧಿಕೃತ ಅಂಗಡಿಗಳನ್ನು ಗರುಡ ಕಾರ್ಯಚರಣೆಯ ಮೂಲಕ ತೆರವು ಮಾಡಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿತ್ತು. ಅದೂ ಕಾರ್ಯರೂಪಕ್ಕೆ ಬಂದಿಲ್ಲ.
ತೆರವಾಗದ ಬೇಲಿ
ಬಂಟ್ವಾಳ ತಾಲೂಕು ಪಂಚಾಯಿತಿ ಎದುರು ಶಾಸಕರ ಕಚೇರಿ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಬರುವವರು ವಾಹನಗಳನ್ನು ನಿಲ್ಲಿಸಲೂ ಜಾಗವಿಲ್ಲ. ಅಲ್ಲಿ ತಡೆಬೇಲಿ ಹಾಕಲಾಗಿದ್ದು, ಶಾಸಕರು ಸೂಚನೆ ನೀಡಿದ ಬಳಿಕವೂ ತೆರವು ಕಾರ್ಯ ನಡೆದಿಲ್ಲ. ಕೃಷಿ, ತೋಟಗಾರಿಕೆ, ಸಿಡಿಪಿಒ, ಕನ್ನಡ ಭವನ, ಸರ್ವೇ, ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಬರುವವರು ವಾಹನಗಳನ್ನು ನಿಲ್ಲಿಸಲು ಪರದಾಡಬೇಕಾಗುತ್ತದೆ. ಹೀಗಾಗಿ ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲಿ ವಾಹನಗಳನ್ನು ಅನಿವಾರ್ಯವಾಗಿ ನಿಲ್ಲಿಸಲಾಗುತ್ತಿದೆ.
ಜಾಗಕ್ಕಿಂತ ಇಚ್ಛಾಶಕ್ತಿಯೇ ಕೊರತೆ
ಇಚ್ಛಾಶಕ್ತಿ ಇದ್ದರೆ, ಪಾರ್ಕಿಂಗ್ ಮಾಡಲು ಜಾಗ ಬೇಕಾದಷ್ಟು ಗುರುತಿಸಬಹುದು. ಪೊಲೀಸ್ ಠಾಣೆಗೆ ತೆರಳುವ ಮಾರ್ಗದ ಪಕ್ಕದಲ್ಲೇ ಇರುವ ತಾಪಂ ಕಟ್ಟಡದ ಬಳಿ ಹಲವು ವಾಹನ ವ್ಯವಸ್ಥಿತವಾಗಿ ನಿಲ್ಲಿಸಬಹುದು. ಹಿಂದೆ ಬಿಡಿಒ ಕಚೇರಿ ಇದ್ದ ಜಾಗದಲ್ಲಿ ಪಾರ್ಕಿಂಗ್ ಮಾಡಲು ಅವಕಾಶವಿದೆ. ಸಬ್‌ರಿಜಿಸ್ಟ್ರಾರ್ ಹಿಂದೆ ಕಾರ್ಯಾಚರಿಸುತ್ತಿದ್ದ ಜಾಗವನ್ನು ಮಲ್ಟಿಲೆವೆಲ್ ಪಾರ್ಕಿಂಗ್ ಮಾಡಬಹುದು. ಕೈಕುಂಜಕ್ಕೆ ತೆರಳುವ ಮಾರ್ಗದ ಎಡ, ಬಲಗಳೆಲ್ಲವೂ ಸರ್ಕಾರಿ ಜಾಗಗಳು. ಇವನ್ನು ಪೇ ಪಾರ್ಕಿಂಗ್‌ಗೆ ಬಳಸಬಹುದು. ಹೀಗಾದಾಗ ವಾಹನ ನಿಲುಗಡೆಗೊಂದು ಶಿಸ್ತು ದೊರಕುತ್ತದೆ.