ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣದ ಬಳಿಯ ಸೆಂಟ್ರಲ್ ಬ್ಯಾಂಕ್ನಿಂದ ಅಬ್ಬಿಗೇರಿ ರಸ್ತೆಯ ಆಟೋ ನಿಲ್ದಾಣದವರೆಗೆ ಪೊಲೀಸರು ಬ್ಯಾರಿಕೇಡ್ ಹಾಕಿ, ವಾಹನಗಳು ನಿಲುಗಡೆಯಾಗದಂತೆ ನೋಡಿಕೊಳ್ಳಲು ಸಿಬ್ಬಂದಿ ನೇಮಿಸಿದ್ದಾರೆ. ವಿವಿಧ ಕೆಲಸ, ಕಾರ್ಯಗಳಿಗೆ ಬರು-ಹೋಗುವ ಸಾರ್ವಜನಿಕರಿಗೆ ವಾಹನ ನಿಲುಗಡೆ ಮಾಡುವುದು ದೊಡ್ಡ ತಲೆನೋವಾಗಿದೆ.
ಗದಗ ಮಾರ್ಗವಾಗಿ ಬರುವ ಬಸ್ಗಳು ನಿಲ್ದಾಣಕ್ಕೆ ಹೋಗುವ ದುರ್ಗಾ ಸರ್ಕಲ್ ಹತ್ತಿರ ಸಾಕಷ್ಟು ವಾಹನಗಳು ನಿಲುಗಡೆಯಾಗಿ ಬಸ್ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿತ್ತು. ಅದಕ್ಕಾಗಿ, ಈ ಹಿಂದಿನ ಪಿಎಸ್ಐ ಕಿರಣಕುಮಾರ ಕೋಣನಕೆರೆಯವರು ಬಸ್ ನಿಲ್ದಾಣದ ಹತ್ತಿರ ನೋ ರ್ಪಾಂಗ್ ಫಲಕ ಹಾಕಿಸಿದ್ದರು. ಆದರೂ, ನೋ ರ್ಪಾಂಗ್ ಫಲಕದ ಹತ್ತಿರವೇ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿತ್ತು. ಬುಧವಾರ ಮಧ್ಯಾಹ್ನ ಪಿಎಸ್ಐ ನಿಖಿಲ ಕಾಂಬ್ಳೆ, ದುರ್ಗಾ ಸರ್ಕಲ್ದಿಂದ ಅಬ್ಬಿಗೇರಿ ರಸ್ತೆ ಆಟೋ ನಿಲ್ದಾಣವರೆಗೆ ಬ್ಯಾರಿಕೇಡ್ ಹಾಕಿ ಅಡ್ಡಲಾಗಿ ರಿಬ್ಬನ್ ಕಟ್ಟಿಸಿದ್ದಾರೆ. ಇದರಿಂದ ಯಾವುದೇ ವಾಹನ ನಿಲುಗಡೆ ಸಾಧ್ಯವಾಗುತ್ತಿಲ್ಲ. ಬಸ್ ಸಂಚಾರ ಸುಲಭವಾಗಿದೆ. ಆದರೆ, ವಾಹನ ಸವಾರರಿಗೆ ಬೈಕ್ ರ್ಪಾಂಗ್ ಮಾಡುವುದು ತಲೆ ಬಿಸಿಯಾಗಿದೆ.
ಎರಡು ದಿನಗಳಿಂದ ಸೆಂಟ್ರಲ್ ಬ್ಯಾಂಕ್ ಸಾಲಿನ ಅಂಗಡಿಗಳಿಗೆ ಬರುವ-ಹೋಗುವವರು ವಾಹನ ಎಲ್ಲಿ ನಿಲುಗಡೆ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ಬ್ಯಾಂಕ್ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಇನ್ನೊಂದು ಬದಿಯಲ್ಲಿ ಅಕ್ರಮ ಗೂಡಂಗಡಿಗಳಿವೆ. ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಹೀಗಾಗಿ ಸವಾರರು ಚಿಂತೆಯಲ್ಲಿದ್ದಾರೆ.
ಸಮಸ್ಯೆಗೆ ಕಾರಣ ಏನು?: ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸೆಂಟ್ರಲ್ ಬ್ಯಾಂಕ್, ಹೋಟೆಲ್, ಕಟಿಂಗ್ ಶಾಪ್, ಬೈಕ್, ಗ್ಯಾರೇಜ್ ಸೇರಿ ಹತ್ತಾರು ಅಂಗಡಿಗಳಿವೆ. ಅಲ್ಲಿಗೆ ಬರುವ ಗ್ರಾಹಕರು ತಮ್ಮ ಬೈಕ್ಗಳನ್ನು ಅಂಗಡಿಗಳ ಮುಂದೆ ನಿಲ್ಲಿಸಿ ಹೋಗುವುದು ಸಾಮಾನ್ಯವಾಗಿತ್ತು. ಆದರೆ, ದ್ವಿಪಥ ರಸ್ತೆ ನಿರ್ವಣವಾದ ನಂತರ ಗದಗ ಮಾರ್ಗವಾಗಿ ಬರುವ ಬಸ್ಗಳು ದುರ್ಗಾ ಸರ್ಕಲ್ ಹತ್ತಿರ ತಿರುಗಲು ಅಂಗಡಿಗಳ ಮುಂದೆ ಪಾರ್ಕ್ ಮಾಡಿರುವ ವಾಹನಗಳಿಂದ ತೊಂದರೆಯಾಗಲಾರಂಭಿಸಿತು. ಅವೈಜ್ಞಾನಿಕವಾಗಿ ನಿರ್ವಣವಾಗಿರುವ ರೋಡ್ ರಿವೈಡರ್ಗಳಿಂದ ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದುರ್ಗಾ ಸರ್ಕಲ್ದಿಂದ ಅಬ್ಬಿಗೇರಿ ರಸ್ತೆಯ ಆಟೋ ನಿಲ್ದಾಣದ ವರೆಗೆ ಇರುವ ರಸ್ತೆ ವಿಭಜಕ ತೆಗೆದು ಹಾಕಿ, ರಸ್ತೆಯ ಇನ್ನೊಂದು ಬದಿಯಲ್ಲಿನ ಗೂಡಂಗಡಿಗಳನ್ನು ತೆರವು ಮಾಡುವುದರಿಂದ ಸಮಸ್ಯೆಗೆ ಮುಕ್ತಿ ಕಾಣಲು ಸಾಧ್ಯವಾಗಬಹುದು.
ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಕಾರಣ ವಾಹನ ನಿಲುಗಡೆ ನಿಷೇಧಿಸಿರುವುದು ಸರಿಯಾಗಿದೆ. ಆದರೆ, ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ, ಏಕಾಏಕಿ ವಾಹನ ನಿಲುಗಡೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ಮೊದಲು ಅವೈಜ್ಞಾನಿಕ ರಸ್ತೆ ವಿಭಜಕಗಳನ್ನು ತೆಗೆದು ಹಾಕಿ, ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡಲು ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಮುಂದಾಗಬೇಕು. | ಹುಲಗಪ್ಪ ಬಂಡಿವಡ್ಡರ ನಿವಾಸಿ, ನರೇಗಲ್ಲ
ಬಸ್ ನಿಲ್ದಾಣ ಮಾರ್ಗದಲ್ಲಿ ವಾಹನ ನಿಲುಗಡೆಯಿಂದ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿತ್ತು. ಆದ್ದರಿಂದ, ಒಂದು ಭಾಗದ ಕಡೆ ವಾಹನ ನಿಷೇಧಿಸುವ ಮೂಲಕ ಸಂಚಾರ ಸುಗಮಗೊಳಿಸಲಾಗಿದೆ. ಬಸ್ ನಿಲ್ದಾಣದ ಆವರಣದಲ್ಲಿ ಪರ್ಯಾಯವಾಗಿ ವಾಹನ ನಿಲುಗಡೆಗೆ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಲಾಗುತ್ತಿದೆ. | ನಿಖಿಲ ಕಾಂಬ್ಳೆ ಪಿಎಸ್ಐ, ನರೇಗಲ್ಲ
ಬಸ್ ನಿಲ್ದಾಣದ ಸುತ್ತಲಿನ ಅನಧಿಕೃತ ಅಂಗಡಿಗಳ ಮಾಲೀಕರಿಗೆ ಒಂದು ವಾರ ಸಮಯಾವಕಾಶ ನೀಡಲಾಗಿದೆ. ಅಷ್ಟರಲ್ಲಿ ಸ್ವಯಂಪ್ರೇರಿತರಾಗಿ ಮಾಲೀಕರು ಅಂಗಡಿ ತೆರವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಪಟ್ಟಣ ಪಂಚಾಯಿತಿಯಿಂದ ತೆರವುಗೊಳಿಸಬೇಕಾಗುತ್ತದೆ. | ಶಿವಾನಂದ ಅಜ್ಜಣ್ಣವರ ಮುಖ್ಯಾಧಿಕಾರಿ, ಪಪಂ