ಜಿಲ್ಲೆ

ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮತ್ತೆ ಉಲ್ಬಣಿಸಿದ ಪಾರ್ಕಿಂಗ್ ತಲೆನೋವು

Chitradurga

ಚಿತ್ರದುರ್ಗ:  ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಮತ್ತೆ ಎದುರಾಗಿದೆ. ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ಮನಸೋ ಇಚ್ಛೆ ವಾಹನಗಳನ್ನು ನಿಲ್ಲಿಸಿ ಪರಸ್ಥಳಗಳಿಗೆ ತೆರಳುತ್ತಿದ್ದಾರೆ.

ರಾತ್ರಿ ವೇಳೆಗೆ ಮರಳಿ ಬರುವವರಾದರೆ ಸರಿ. ಒಂದೆರೆಡು ದಿನಗಳದಾದರೆ ಹೇಗೆ? ಸಮೀಪದ ಹಳ್ಳಿಗಳು, ನಾಲ್ಕಾರು ಕಿಮೀ ದೂರದ ಬಡಾವಣೆ ವಾಸಿಗಳು ನಿಲ್ದಾಣದಲ್ಲಿ ವಾಹನ ನಿಲ್ಲಿಸಿ ಪರಸ್ಥಳಗಳಿಗೆ ತೆರಳಲು ಹಿಂದೇಟು ಹಾಕುವ ಸ್ಥಿತಿ ಇದೆ.

ಕಳೆದ ಏಪ್ರಿಲ್ ವೇಳೆ ನಿಲ್ದಾಣದ ಆವರಣದಲ್ಲಿನ ಅರ್ಧ ಎಕರೆ ಜಾಗದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಸಿಸಿ ಕ್ಯಾಮರಾ, ಬೆಳಕು, ಸೂರಿನ ವ್ಯವಸ್ಥೆ ಇಲ್ಲದಿದ್ದರೂ, ಭದ್ರತೆ ಇದೆ ಎಂಬ ಕಾರಣಕ್ಕೆ ಪ್ರಯಾಣಿಕರು ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸುತ್ತಿದ್ದರು. ಪಾರ್ಕಿಂಗ್ ಶುಲ್ಕದ ಬಗ್ಗೆ ದೂರಿದ್ದರೂ ಒಂದು ವ್ಯವಸ್ಥೆ ಇದೆ ಎಂಬ ಸಮಾಧಾನವಿತ್ತು.

ಆದರೆ, ಗುತ್ತಿಗೆದಾರ ಹಲವು ತಿಂಗಳಿಂದ ಮಾಸಿಕ 90 ಸಾವಿರ ರೂ. ಬಾಡಿಗೆ ಬಾಕಿ ಉಳಿಸಿಕೊಂಡ ಕಾರಣ ನಿಗಮ ಆತನ ಗುತ್ತಿಗೆ ರದ್ದು ಪಡಿಸಿದೆ. ಪಾರ್ಕಿಂಗ್ ಗೇಟ್‌ಗೆ ಬೀಗ ಹಾಕಲಾಗಿದೆ. ಇದರಿಂದ ಪ್ರಯಾಣಿಕರು ನಿಲ್ದಾಣದೊಳಗೆ ನೂರಾರು ವಾಹನಗಳನ್ನು ನಿಲ್ಲಿಸುವಂತಾಗಿದೆ.

ಅಧಿಕಾರಿಗಳ ಸಬೂಬು:

ನಿಲ್ದಾಣದಲ್ಲಿ ಕಾರು, ದ್ವಿಚಕ್ರ ಮತ್ತಿತರ ವಾಹನಗಳಿಗೆಂದೇ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಅಗತ್ಯವಿದೆ ಎಂಬ ಪ್ರಯಾಣಿಕರ ಕೂಗನ್ನು ನಿಗಮ ಈವರೆಗೂ ಕೇಳಿಸಿಕೊಂಡಿಲ್ಲ. ಸ್ಥಳಾವಕಾಶದ ಕೊರತೆ ಇತ್ಯಾದಿ ಸಬೂಬು ಹೇಳಿಕೊಂಡೇ ಅಧಿಕಾರಿಗಳು ಕಾಲ ನೂಕುತ್ತಿದ್ದಾರೆ.

ಹೈಟೆಕ್ ನಿಲ್ದಾಣಕ್ಕೆ ಟೆಂಡರ್:

ನಗರದಲ್ಲಿ ಹೈಟೆಕ್ ಕೆಎಸ್‌ಆರ್‌ಟಿಸಿ ನಿಲ್ದಾಣ ನಿರ್ಮಿಸಲು 37 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಮೊದಲ ಹಂತದ ನಿಮಾರ್ಣಕ್ಕೆ ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ನಿಲ್ದಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಾಧ್ಯತೆ ಇದೆ.

*ಕೋಟ್

ಕಳೆದ ಜುಲೈನಿಂದ ಮಾಸಿಕ ಬಾಡಿಗೆ ಪಾವತಿಸದ ಕಾರಣ ಈ ಹಿಂದಿನ ಗುತ್ತಿಗೆಯನ್ನು ರದ್ದು ಪಡಿಸಲಾಗಿದೆ. ಪಾರ್ಕಿಂಗ್ ನಿರ್ವಹಣೆಗಾಗಿ ಹೊಸದಾಗಿ ಶುಕ್ರವಾರ ಟೆಂಡರ್ ಕರೆಯಲಾಗಿದ್ದು, ಒಂದು ತಿಂಗಳ ಬಳಿಕ ಸಮಸ್ಯೆಗೆ ಪರಿಹಾರ ಸಿಗಲಿದೆ.

ಸಿದ್ದೇಶ್ವರ ವಿಭಾಗೀಯ ನಿಯಂತ್ರಣಾಧಿಕಾರಿ

ಕೆಎಸ್‌ಆರ್‌ಟಿಸಿ, ಚಿತ್ರದುರ್ಗ