ಉಡುಪಿ: ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ -169ಎರಲ್ಲಿ ಪರ್ಕಳ ಭಾಗದಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು, ಹೊಂಡ ಗುಂಡಿಗಳಿಂದ ತುಂಬಿರುವ ಪರ್ಕಳದ ತಿರುವಿನ ರಸ್ತೆಯಲ್ಲಿ 40 ಅಡಿ ಅಗಲ ಮತ್ತು 50 ಮೀಟರ್ ಉದ್ದದ ಪ್ರದೇಶಕ್ಕೆ ಕೂಡಲೇ ಕಾಂಕ್ರೀಟ್ ಹಾಕುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಪರ್ಕಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಗತ್ಯವಿದ್ದರೆ ವಾಹನ ಸಂಚಾರದ ಮಾರ್ಗವನ್ನು ಬದಲಾಯಿಸಿ ಶಾಶ್ವತ ಪರಿಹಾರವಾಗಿ ಕಾಂಕ್ರೀಟಿಕರಣ ಮಾಡಬಹುದು. ಕೂಡಲೇ ತಿರುವಿನ ರಸ್ತೆ ದುರಸ್ತಿಗೊಳಿಸಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ ನಾಯ್ಕ ಮಾತನಾಡಿ, ಪರ್ಕಳದಲ್ಲಿ ಇಳಿಜಾರು ಪ್ರದೇಶವಾದ್ದರಿಂದ ತೇಪೆಗಳಿಂದ ತಾತ್ಕಾಲಿಕ ರಸ್ತೆ ದುರಸ್ತಿ ನಿಲ್ಲುವುದಿಲ್ಲ. ಹಾಗಾಗಿ ಶಾಶ್ವತ ಪರಿಹಾರ ಕಷ್ಟಸಾಧ್ಯವಾಗಿದೆ ಎಂದು ವಿವರಿಸಿದರು. ನಗರಸಭೆ ಸದಸ್ಯೆ ಸುಮಿತ್ರಾ ನಾಯಕ್ ಉಪಸ್ಥಿತರಿದ್ದರು.