* ಪಿ.ಬಿ.ಹರೀಶ್ ರೈ
ಮಂಗಳೂರು : ಗ್ರಾಮ ಪಂಚಾಯಿತಿ ಸದಸ್ಯರಿಂದ ಲೋಕಸಭೆ ಸದಸ್ಯರವರೆಗೆ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯವ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವಿದೆ.
ಆದರೆ ಕೆಲವು ನಿಯಮಗಳು ಅನ್ವಯ..!
ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಯಾವುದೇ ಒಂದು ಸ್ಥಳೀಯಾಡಳಿತ
ಸಂಸ್ಥೆಯನ್ನು ಪ್ರತಿನಿಧಿಸಿದರೆ ಮಾತ್ರ ವಿಧಾನ ಪರಿಷತ್ ಚುನಾವಣೆಗೆ ಮತದಾನದ ಅವಕಾಶ. ಈ ಬಾರಿಯ ಉಪ ಚುನಾವಣೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರಿಗೆ ಮತದಾನದ ಅವಕಾಶವಿಲ್ಲ.
ಬೈಂದೂರು ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯಿರುವ ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದರೂ ಚುನಾವಣೆ ನಡೆದಿಲ್ಲ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೂ ಚುನಾವಣೆಯಾಗಿಲ್ಲ. ಹಾಗಾಗಿ ಶಾಸಕ ಗುರುರಾಜ್ ಗಂಟಿಹೊಳೆ ಸದ್ಯ ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸುತ್ತಿಲ್ಲ. ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಅವರು ಬೆಳ್ತಂಗಡಿ ಗ್ರಾಮಾಂತರ ಪ್ರದೇಶದ ಮತದಾರರಾಗಿರುವ ಕಾರಣ ಬೆಳ್ತಂಗಡಿ ಪಟ್ಟಣ ಪಂಚಾಯಿತಿಯನ್ನು ಪ್ರತಿನಿಧಿಸುತ್ತಿಲ್ಲ. ಹಾಗಾಗಿ ಇವರಿಬ್ಬರು ಹೆಸರು ಸ್ಥಳೀಯಾಡಳಿತ ಸಂಸ್ಥೆಗಳ ಮತದಾರರ ಪಟ್ಟಿಯಲ್ಲಿ ಇಲ್ಲ.
*ಮನಪಾ ಗರಿಷ್ಠ ಮತದಾರರು :
ಉಭಯ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಗರಿಷ್ಠ ಮತದಾರರಿದ್ದಾರೆ. ಒಟ್ಟು 60 ಕಾರ್ಪೋರೇಟರ್‌ಗಳು, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಎಂಎಲ್‌ಸಿಗಳಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ..ಹೀಗೆ ಒಟ್ಟು 65 ಮಂದಿ ಇಲ್ಲಿ ಮತ ಚಲಾಯಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರು ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಮತದಾದರರ ಪಟ್ಟಿಯಲ್ಲಿ ನಮೂದಿಸಲಾಗಿದೆ.
*ಮತಗಟ್ಟೆ ಆಯ್ಕೆ ಅವಕಾಶ
ಇಬ್ಬರು ಸಂಸದರು, 12 ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿದೆ. ಶಾಸಕರ ಹೆಸರುಗಳು ಆಯಾ ತಾಲೂಕಿನ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಸಂಸದರು ತಾವು ಮತ ಚಲಾಯಿಸಲು ಆಯ್ಕೆ ಮಾಡುವ ಮತಗಟ್ಟೆಯನ್ನು ತಿಳಿಸಲು ಅವಕಾಶವಿದೆ. ಶಾಸಕರ ಕ್ಷೇತ್ರದಲ್ಲೂ ಒಂದಕ್ಕಿಂತ ಹೆಚ್ಚು ನಗರ
ಸ್ಥಳೀಯಾಡಳಿತ ಸಂಸ್ಥೆ ಇದ್ದರೆ ಮತಗಟ್ಟೆ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.
* 33 ಸ್ಥಾನ ಖಾಲಿ
ದ.ಕ. ಜಿಲ್ಲೆಯಲ್ಲಿ 1 ಪುರಸಭೆ ಸ್ಥಾನ ಹಾಗೂ 28 ಗ್ರಾಪಂ ಸ್ಥಾನ ಹಾಗೂ ಉಡುಪಿ ಜಿಲ್ಲೆಯಲ್ಲಿ 4 ಗ್ರಾಪಂ ಸ್ಥಾನ ವಿವಿಧ ಕಾರಣಗಳಿಂದ ಖಾಲಿ ಇದೆ. ಜಿಪಂ, ತಾಪಂ ಚುನಾವಣೆ ನಡೆಯದ ಕಾರಣ ಸುಮಾರು 276 ಮತಗಳು ಕಡಿಮೆಯಾಗಿವೆ. ಕಡಬ, ಬಜ್ಪೆ, ಕಿನ್ನಿಗೋಳಿ ಮತ್ತು ಬೈಂದೂರು ಪಟ್ಟಣ ಪಂಚಾಯಿತಿ ಆಗಿ ಘೋಷಣೆಯಾಗಿದ್ದರೂ, ಇನ್ನೂ ಚುನಾವಣೆ ನಡೆದಿಲ್ಲ.