ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳು ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಮುಂದಿನ ಚುನಾವಣೆಯಲ್ಲಿ 130 ರಿಂದ 140 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಬುಧವಾರ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಶೀರ್ಷಿಕೆಯಡಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿಗಳ ಭ್ರಮೆಯಲ್ಲಿದ್ದು, ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತುಹಾಕಲು ಜನರು ಈಗಾಗಲೇ ತೀರ್ಮಾನಿಸಿದ್ದಾರೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದ್ದು, ಅಧಿಕಾರ ಬಿಟ್ಟು ಹೋಗುವಂತೆ ಜನರು ಸಂದೇಶ ನೀಡಿದ್ದಾರೆ. ಬಿಜೆಪಿಗೆ ಆಶೀರ್ವಾದ ಮಾಡಲು ಮತದಾರರು ಸಿದ್ಧರಾಗಿದ್ದಾರೆ. ಬಿಜೆಪಿಯೊಳಗಿನ ಸಣ್ಣಪುಟ್ಟ ಗೊಂದಲಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡುವಂತೆಯೂ ಜನರು ಸಂದೇಶ ನೀಡಿದ್ದಾರೆ ಎಂದರು.
ಬ್ಯಾಲೆಟ್ ಪೇಪರ್ ಬಳಸಿ ನಡೆಸಿದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ಗೆ ಯಾವುದರ ಮೇಲೂ ನಂಬಿಕೆ ಇಲ್ಲದಂತಾಗಿದೆ. ಈ ಫಲಿತಾಂಶವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ತಲುಪಿ ಸಬೇಕು. ಮುಂದಿನ ಬಾರಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದು, ಬರ ಪರಿಹಾರ ನೀಡಲು ಹಾಗೂ ಉದ್ಯೋಗ ಕಲ್ಪಿಸಲು ಸಾಧ್ಯವಾಗಿಲ್ಲ. ಮುಡಾ ಹಗರಣ, ವಾಲ್ಮೀಕಿ ಹಗರಣ ಮತ್ತು ಸಚಿವರ ರಾಜೀನಾಮೆ ವಿಚಾರಗಳು ಕಾಂಗ್ರೆಸ್ ಆಡಳಿತವನ್ನು ಬಯಲು ಮಾಡಿವೆ. ಬಿಜೆಪಿ ನಡೆಸಿದ ಹೋರಾಟಗಳ ಪರಿಣಾಮ ಜನರು ಎನ್ಡಿಎ ಸರ್ಕಾರವನ್ನು ತರಲು ಚಿಂತನೆ ನಡೆಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಪರಿಹಾರ ಘೋಷಣೆಯಾಗಿ ಉಳಿದಿದೆ. ಕಬ್ಬು ಬೆಳೆಗಾರರು ಸಿಹಿ ಸುದ್ದಿ ಸಿಗಬಹುದು ಎಂದು ಕಾಯುತ್ತಿದ್ದಾಗ, ಮುಖ್ಯಮಂತ್ರಿ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ತೆರಳಿ, ಬೊಕ್ಕಸದಲ್ಲಿ ಹಣವಿಲ್ಲ, ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಈ ವಿಷಯವನ್ನು ತಿಳಿಸಲು ವಿಶೇಷ ವಿಮಾನದಲ್ಲಿ ಹೋಗಬೇಕಿತ್ತೇ ಎಂದು ಪ್ರಶ್ನಿಸಿದರು.
ಕಬ್ಬಿನಿಂದ ರಾಜ್ಯಕ್ಕೆ ದೊಡ್ಡ ಆದಾಯ ಬರುತ್ತಿದ್ದು, ಕಬ್ಬಿನ ಉಪ ಉತ್ಪನ್ನಗಳಿಂದಲೂ ಲಾಭವಾಗುತ್ತಿದೆ. ಕಬ್ಬಿನಿಂದ ವಾರ್ಷಿಕ 15 ಸಾವಿರ ಕೋಟಿ ಆದಾಯ ಲಭಿಸುತ್ತದೆ. ಹೀಗಿದ್ದರೂ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವುದನ್ನು ಬಿಟ್ಟು ರೈತರಿಗೆ ಪ್ರತಿ ಟನ್ ಕಬ್ಬಿಗೆ 500 ರೂ. ಪ್ರೋತ್ಸಾಹಧನ ನೀಡಬೇಕು. ರೈತರ ಜೀವನದೊಂದಿಗೆ ಚೆಲ್ಲಾಟವಾಡದೆ, ಕಬ್ಬು ಬೆಳೆಗಾರರ ಹಿತ ಕಾಪಾಡುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.