ಜಿಲ್ಲೆ

ಮನುಷ್ಯರಿಗೆ ಪ್ರಕೃತಿಯೇ ವರದಾನ: ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಮತ

ಮಂಡ್ಯ: ಮರಗಳು ಮನುಷ್ಯರಿಗೆ ನೀಡಿರುವ ಪ್ರಕೃತಿಯೇ ಒಂದು ವರದಾನವಾಗಿದೆ ಎಂದು ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ತಾಲೂಕಿನ ಬಿ.ಹೊಸೂರಿನಲ್ಲಿರುವ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಹಾಗೂ ವಿವಿಯ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪರಿಸರ ಅರಿವು ಮತ್ತು ಗ್ರಾಮಸ್ಥರಿಗೆ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಡು ಇದ್ದರೆ ವ್ಯವಸಾಯ ಸಾಧ್ಯವಾಗುತ್ತದೆ. ಮರಗಳಿದ್ದರೆ ಮಳೆ ಬೆಳೆಯಾಗಿ ಮನುಷ್ಯನ ಜೀವನ ಸಾಧ್ಯವಾಗುತ್ತದೆ ಎಂಬುದನ್ನು ಮನಗಂಡು ಕಾಡು ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಾಳಿ, ನೀರು, ಆಹಾರವು ಸಮೃದ್ಧಿಯಾಗಿ ಸಿಗಬೇಕಾದರೆ ಮರಗಳು ಅತ್ಯವಶ್ಯಕವಾಗಿದೆ. ಹೇರಳವಾಗಿ ನೀರನ್ನು ನಿರಂತರವಾಗಿ ಸಂಗ್ರಹಿಸಿಟ್ಟುಕೊಳ್ಳುವ ಗುಣ ಇರುವುದು ಮರಗಳಿಗೆ ಮಾತ್ರ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಮರಗಳು ಭೂಲೋಕದ ಕಲ್ಪ ವೃಕ್ಷಗಳಾಗಿವೆ ಎಂದರು.

ಪ್ರಾಂಶುಪಾಲ ಚಂದ್ರಶೇಖರಯ್ಯ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪಿ.ಎನ್.ಗೀತಾಮಣಿ, ರಮ್ಯಾ, ರೆಡ್‌ಕ್ರಾಸ್ ಸಂಸ್ಥೆಯ ರಾಮು ಇತರರಿದ್ದರು. ಇದೇ ಸಂದರ್ಭದಲ್ಲಿ ಮಾರಮ್ಮ ದೇವಾಲಯದ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡುವುದರ ಜತೆಗೆ ಪ್ರತಿ ಮನೆಗೂ ಎರಡು ತೆಂಗಿನ ಸಸಿಗಳನ್ನು ವಿತರಿಸಲಾಯಿತು.