ಮಂಡ್ಯ: ಬಹುಜನರಿಗೆ ರಾಜಕೀಯ ಪ್ರಜ್ಞೆ ಹೆಚ್ಚಿಸಿದ ದಾದಾ ಸಾಹೇಬ್ ಕಾನ್ಶಿರಾಂ ಪ್ರಾತ:ಸ್ಮರಣೀಯರು ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್ ಹೇಳಿದರು.
ನಗರದ ಮಹಾಚೇತನ ಟ್ರಸ್ಟ್ ಸಭಾಂಗಣದಲ್ಲಿ ಬಿಎಸ್ಪಿ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಬಿಎಸ್ಪಿ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಶಿರಾಂ ಅವರ ಪರಿನಿಬ್ಬಾಣ ದಿನದಲ್ಲಿ ಮಾತನಾಡಿದ ಅವರು, ಬಹುಜನರು ಈ ದೇಶದ ಆಸ್ತಿ. ಭಾರತದಲ್ಲಿ ಬಹುಜನರೇ ದೊಡ್ಡ ಸಮುದಾಯವಾಗಿದ್ದು, ಎಲ್ಲರೂ ಒಗ್ಗೂಡಿ ದೇಶದ ಆಡಳಿತ ನಡೆಸುವ ರಾಜಕೀಯ ಪ್ರಜ್ಞೆ ಹೆಚ್ಚಿಸಿ, ರಾಜ್ಯಾಧಿಕಾರ, ದೇಶಾಡಳಿತ ನಡೆಸುವ ಮಾರ್ಗತೋರಿದ ರಾಜಕೀಯ ದಾರ್ಶನಿಕ ಕಾನ್ಶಿರಾಂ ಅವರನ್ನು ಮರೆಯಲಾಗದು. ಕೇವಲ ಶೇ.4ರಷ್ಟಿರುವ ಮನುವಾದಿಗಳು ದೇಶವನ್ನು ಆಳುತ್ತಾ ಬಹುಜನರನ್ನು ತುಳಿಯುತ್ತಿದ್ದಾರೆ. ಹೀಗಾಗಿ ಬಹುಜನರ ಕೈಗೆ ಅಧಿಕಾರದ ಚುಕ್ಕಾಣಿ ಸಿಗಬೇಕಿದೆ. ಆಗಷ್ಟೇ ಸಮಾನತೆ, ರಾಜಕೀಯವಾಗಿ ಅಭಿವೃದ್ದಿ ಕಾಣಬಹುದು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್ ಮಾತನಾಡಿ, ರಾಜಕೀಯ ಎನ್ನುವುದು ವಿಜ್ಞಾನ. ಆದ್ದರಿಂದ ಯಾವಾಗಲೂ ಪ್ರಾಯೋಗಿಕವಾಗಿಯೇ ಸಾಬೀತಾಗಬೇಕಿದೆ. ರಾಜಕೀಯ ಪ್ರಜ್ಞೆ ಎಲ್ಲರಲ್ಲೂ ಬೆಳೆಯಬೇಕಿದೆ. ಬಹುಜನರು ಆಳುವ ಶಕ್ತಿಯಾಗಬೇಕಾದರೆ ಸಂಘಟನಾ ಚಳವಳಿ ಅಗತ್ಯ ಎಂದರು.
ಜಿಲ್ಲಾ ಉಸ್ತುವಾರಿ ಚಲುವರಾಜ್, ಕಾರ್ಯದರ್ಶಿ ಅನಿಲ್‌ಕುಮಾರ್, ಪದಾಧಿಕಾರಿಗಳಾದ ನಂಜುಂಡಸ್ವಾಮಿ, ವಿನಯ್, ಬಸ್ತಿ ಪ್ರದೀಪ್, ಆನಂದ್ ಇತರರಿದ್ದರು.