ಜಿಲ್ಲೆ

ಆನ್‌ಲೈನ್, ಆಫ್‌ಲೈನ್ ಎರಡೂ ಶಿಕ್ಷಣ ಮುಖ್ಯ : ಮೋದಿ

reportermys


*ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಮತ


ಮೈಸೂರು: ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪಾಠ-ಪ್ರವಚನದ ಕಡೆ ಗಮನ ಕೇಂದ್ರೀಕರಿಸಿದರೆ ಆನ್‌ಲೈನ್, ಆಫ್‌ಲೈನ್ ಯಾವುದೇ ಮಾಧ್ಯಮ ಸಮಸ್ಯೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ಪ್ರಧಾನಮಂತ್ರಿ ಅವರ ಬಹುನಿರೀಕ್ಷಿತ ‘ಪರೀಕ್ಷಾ ಪೇ ಚರ್ಚಾ’ ವಾರ್ಷಿಕ ಕಾರ್ಯಕ್ರಮದಲ್ಲಿ ಶುಕ್ರವಾರ ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿಯ ಜವಾಹರ ನವೋದಯ ವಿದ್ಯಾಲಯದ 11ನೇ ತರಗತಿ ವಿದ್ಯಾರ್ಥಿ ಎಂ.ಬಿ.ತರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.


‘ಆನ್‌ಲೈನ್ ಪಾಠದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಡಕುಗಳನ್ನು ತಡೆಯುವುದು ಹೇಗೆ? ಫೇಸ್‌ಬುಕ್ ಸೇರಿದಂತೆ ನಾನಾ ನವಮಾಧ್ಯಮಗಳ ನಡುವೆ ಆನ್‌ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ಓದಿನ ಕಡೆ ಕೇಂದ್ರೀಕರಿಸುವುದು ಹೇಗೆ’ ಎಂದು ತರುಣ್ ವರ್ಚುವಲ್ ಮೂಲಕ ಪ್ರಧಾನಿಗೆ ಪ್ರಶ್ನೆಯನ್ನು ಮುಂದಿಟ್ಟರು.


ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಭಯಭೀತ ವಾತಾವರಣದಿಂದ ದೂರವಿರಬೇಕೆಂದು ನಾನು ಬಯಸುತ್ತೇನೆ. ಜ್ಞಾನವನ್ನು ಪಡೆಯಲು ಆನ್‌ಲೈನ್ ಶಿಕ್ಷಣ ಸಹಕಾರಿ. ಆದರೆ, ಆಫ್‌ಲೈನ್ ಶಿಕ್ಷಣ ಆ ಜ್ಞಾನವನ್ನು ಉಳಿಸಿಕೊಳ್ಳಲು ಮತ್ತು ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಉಪಯೋಗವಾಗುತ್ತದೆ. ಆಫ್‌ಲೈನ್ ತರಗತಿ ಒಂದು ನಿಗದಿತ ಸ್ಥಳದಲ್ಲಿ ಮಾತ್ರ ಕಲಿಯಲು ಅವಕಾಶ. ಆದರೆ, ಆನ್‌ಲೈನ್ ತರಗತಿ ಎಲ್ಲಿ ಬೇಕಾದರೂ ಕಲಿಯಬಹುದು. ಮಕ್ಕಳು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಪಾಠ ಕಲಿಯಬೇಕು. ಆನ್‌ಲೈನ್ ಅಥವಾ ಆಫ್‌ಲೈನ್ ತರಗತಿಯಾದರೂ ಮಕ್ಕಳಿಗೆ ಏಕಾಗ್ರತೆ ಮುಖ್ಯವಾಗುತ್ತದೆ ಎಂದರು.


ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಆನ್‌ಲೈನ್ ತರಗತಿಗಳಿಗೆ ಮಹತ್ವವಿದೆ. ಆಯಾ ಕಾಲಘಟ್ಟದಲ್ಲಿ ಅನೇಕ ಬದಲಾವಣೆಗಳಾಗಿವೆ. ಬದಲಾದ ಸನ್ನಿವೇಶದಲ್ಲಿ ಆನ್‌ಲೈನ್ ಶಿಕ್ಷಣವೂ ಮುಖ್ಯವಾಗಿದೆ. ಮಕ್ಕಳು ತರಗತಿಯಲ್ಲಿ ಕೂತು ಪಾಠ ಕೇಳಿದರೂ, ಆನ್‌ಲೈನ್‌ನಲ್ಲಿ ಅದಕ್ಕೆ ಪೂರಕವಾದ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬಹುದು. ಹಾಗಾಗಿ, ಈಗ ಶಿಕ್ಷಣದಲ್ಲಿ ಆನ್‌ಲೈನ್, ಆಫ್‌ಲೈನ್ ಎರಡೂ ಮುಖ್ಯ ಎಂದರು.

ಗಮನ ಸೆಳೆದ ವಿದ್ಯಾರ್ಥಿ

ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿಯ ಜವಾಹರ ನವೋದಯ ವಿದ್ಯಾಲಯದ 11ನೇ ತರಗತಿ ವಿದ್ಯಾರ್ಥಿ ಎಂ.ಬಿ.ತರುಣ್ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗಿಯಾಗಿ ಗಮನ ಸೆಳೆದರು. ತರುಣ್ ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿಯರಾಗಿದ್ದು, ತಾಯಿ ಮಂಡ್ಯದಲ್ಲಿ ಶಿಕ್ಷಕಿಯಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮವನ್ನು ಬೃಹತ್ ಎಲ್ಇಡಿ ಪರದೆಯಲ್ಲಿ ವೀಕ್ಷಿಸಿದರು. ಪ್ರಧಾನಿ ಅವರ ಮಾತನ್ನು ಶ್ರದ್ಧೆಯಿಂದ ಆಲಿಸಿದರು. ಅವರ ಪ್ರತಿ ಸಲಹೆಗೂ ಚಪ್ಪಾಳೆ ತಟ್ಟುತ್ತಿದ್ದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜೆ. ಮಧುಸೂದನ್ ಇತರರಿದ್ದರು.

ವೈದ್ಯಕೀಯ ಸೀಟ್‌ಗಳ ಸಂಖ್ಯೆ ಹೆಚ್ಚಿಸಿ
ಮೈಸೂರು: ಸರ್ಕಾರ ವೈದ್ಯಕೀಯ ಸೀಟ್‌ಗಳ ಸಂಖ್ಯೆ ಹೆಚ್ಚಿಸುವ ಮೂಲಕ ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದು ಎಂ.ಬಿ.ತರುಣ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಮಾಡಲು ಆಸಕ್ತರಾಗಿದ್ದಾರೆ. ಆದರೆ, ನಿಯಮಿತ ಸೀಟ್‌ಗಳಿರುವುದರಿಂದ ಎಲ್ಲರೂ ಓದಲು ಆಗುತ್ತಿಲ್ಲ. ಹಾಗಾಗಿ, ಬಹುತೇಕ ವಿದ್ಯಾರ್ಥಿಗಳು ಯೂಕ್ರೇನ್ ಸೇರಿದಂತೆ ಹೊರ ದೇಶಕ್ಕೆ ಹೋಗುತ್ತಿದ್ದಾರೆ. ಸರ್ಕಾರ ನಮ್ಮ ಸರ್ಕಾರಿ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿಪಡಿಸಬೇಕು. ಎಲ್ಲ ರೀತಿಯ ಮೂಲಸೌಕರ್ಯ ನೀಡಬೇಕು. ವಿದ್ಯಾರ್ಥಿಗಳು ಪರೀಕ್ಷೆಯ ಭಯ ಬಿಡಬೇಕು. ಎಲ್ಲ ವಿಷಯಗಳನ್ನೂ ಚೆನ್ನಾಗಿ ಓದಿಕೊಂಡು ಪರೀಕ್ಷೆ ಬರೆಯಬೇಕು ಎಂದರು.
ಪ್ರಧಾನಿ ಅವರ ಜತೆ ಸಂವಾದದಲ್ಲಿ ಭಾಗಿಯಾಗಿರುವುದಕ್ಕೆ ಸಂತಸವಾಗಿದೆ. ಮುಂದೆ ವೈದ್ಯಕೀಯ ಶಿಕ್ಷಣ ಮಾಡಬೇಕು ಅಂದುಕೊಂಡಿದ್ದೇನೆ. ಬಳಿಕ ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.