ಜಿಲ್ಲೆ

ಮಾ.3 ರಿಂದ ಪರೀಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಗೋಪಾಲಕೃಷ್ಣ ಪಾದೂರ್

ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೊಳಪಟ್ಟ ಪರೀಕ ಸೌಖ್ಯವನ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಧರ್ಮಸ್ಥಳ ಧಮಾರ್ಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಹಾಗೂ ಹೆರ್ಗ ಜಯರಾಮ ತಂತ್ರಿ ನೇತೃತ್ವದಲ್ಲಿ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ಮಾ.3ರಿಂದ 6ರ ವರೆಗೆ ನಡೆಯಲಿದೆ ಎಂದು ಧರ್ಮಸ್ಥಳ ಶಾಂತಿವನ ಟ್ರಸ್ಟ್​ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾ.2ರಂದು ಅಪರಾಹ್ನ 4ರಿಂದ ಪರ್ಕಳ ಬಿ.ಎಂ. ಶಾಲೆ ಬಳಿಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಶಾಸಕ ಯಶ್ಪಾಲ್​ ಸುವರ್ಣ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಾ.3ರಂದು ಬೆಳಗ್ಗೆ ಗಣಪತಿ ಯಾಗದೊಂದಿಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಪ್ರತಿದಿನ ಸಂಜೆ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉಪಸ್ಥಿತರಿರುವರು. 5ರಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದರು.

6ರಂದು ಬ್ರಹ್ಮಕಲಶ

ಮಾ.6ರಂದು ಬೆಳಿಗ್ಗೆ 7.37ರ ಮೀನ ಲಗ್ನಸುಮುಹೂರ್ತದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಡಾ. ಹೆಗ್ಗಡೆ ಮತ್ತವರ ಕುಟುಂಬಿಕರು ಭಾಗವಹಿಸಲಿದ್ದಾರೆ. ಅಪರಾಹ್ನ 4 .30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಭಾವೀ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಉಪಸ್ಥಿತರಿರುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ, ಯಶ್ಪಾಲ್​ ಸುವರ್ಣ, ಮಾಜಿ ಸಚಿವ ವಿನಯಕುಮಾರ್​ ಸೊರಕೆ ಭಾಗವಹಿಸಲಿದ್ದಾರೆ ಎಂದರು. ಧರ್ಮಸ್ಥಳ ಕ್ಷೇತ್ರದ ವತಿಯಿಂದ ಪುಷ್ಪಾಲಂಕಾರ, ನಿತ್ಯ ಅನ್ನಸಂತರ್ಪಣೆ ನಡೆಯಲಿದೆ. ಯೋಗ ಮತ್ತು ನ್ಯಾಚುರೋಪತಿ ಆಸ್ಪತ್ರೆ ವತಿಯಿಂದ ಆಹಾರ ಮೇಳ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪರೀಕ ಸೌಖ್ಯವನದ ವ್ಯವಸ್ಥಾಪಕ ಪ್ರವಿಣ ಕುಮಾರ್​, ವೈದ್ಯಾಧಿಕಾರಿಗಳಾದ ಡಾ.ಗೋಪಾಲ ಪೂಜಾರಿ, ಡಾ.ಶೋಭಿತ್​ ಶೆಟ್ಟಿ ಮತ್ತು ಡಾ.ಪೂಜಾ ಉಪಸ್ಥಿತರಿದ್ದರು.