ಜಿಲ್ಲೆ

ಪರಿಷತ್ ಸಮರಕ್ಕೆ ವೇದಿಕೆ ಸಜ್ಜು ; ರಾಜಣ್ಣ ಋಣ ತೀರಿಸಲು ಮುಂದಾಯಿತಾ ಬಿಜೆಪಿ? : ಕೈ-ಕಮಲ ಮ್ಯಾಚ್ ಫಿಕ್ಸಿಂಗ್!?

Tumakuru

ತುಮಕೂರು : ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. ಕಾಂಗ್ರೆಸ್ ಇನ್ನೂ ಅಧಿಕೃತ ಅಭ್ಯರ್ಥಿ ಹೆಸರು ಘೋಷಿಸದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎನ್.ಲೋಕೇಶ್ ಅವರನ್ನು ಬಿಜೆಪಿ ಕಣಕ್ಕಿಳಿಸಿರುವುದು ರಾಜಕೀಯ ವಲಯದಲ್ಲಿ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಸರ್ಕಾರದ ಉನ್ನತ ಹುದ್ದೆ ತ್ಯಜಿಸಿರುವ ಅನಿಲ್ ಕುಮಾರ್ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಆಗಿದ್ದು ಹೊಸಮುಖ ಎನಿಸಿಕೊಂಡಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರದ ಪತನದ ಬಳಿಕ ಗೂಡು ಸೇರಿದ್ದ ಪಕ್ಷದ ಕಾರ್ಯಕರ್ತರಲ್ಲಿ ಈಗ ಹೊಸ ಉತ್ಸಾಹ ಕಂಡುಬರುತ್ತಿದೆ.

ಸ್ಥಳೀಯ ಸಮರ್ಥ ಅಭ್ಯರ್ಥಿಗಳನ್ನು ಬಿಟ್ಟು ಹೊರಗಿನವರಿಗೆ ಮಣೆಹಾಕಿರುವುದಕ್ಕೆ ಸ್ವಪಕ್ಷೀಯರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಬಿಜೆಪಿ ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ. ಲೋಕೇಶ್ ಮೂಲತಃ ಕೊರಟಗೆರೆ ತಾಲೂಕಿನವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದರೂ ಜಿಲ್ಲೆಯ ಹೊರಗಿನವರು ಎಂಬ ಭಾವನೆ ಸ್ಥಳೀಯ ಕಾರ್ಯಕರ್ತರದ್ದಾಗಿದೆ. ಈ ಬೆಳವಣಿಗೆ ಪಕ್ಷದೊಳಗೆ ಬಂಡಾಯದ ಹೊಗೆ ಆರಂಭವಾಗುವಂತೆ ಮಾಡಿದೆ.

ಈ ಬಾರಿ ಸರ್ಕಾರ ಆಡಳಿತದಲ್ಲಿದ್ದು, ಇಬ್ಬರು ಸಚಿವರು ಸೇರಿ ಐವರು ಶಾಸಕರು, ಇಬ್ಬರು ಎಂಎಲ್ಸಿ, ಕೇಂದ್ರ ಸಚಿವರನ್ನು ಒಳಗೊಂಡ ಇಬ್ಬರು ಸಂಸದರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಉತ್ತಮ ಅವಕಾಶ ಹೊಂದಿದೆ. ಹಾಗಾಗಿ, ಬಿಜೆಪಿಯಿಂದ ಸ್ಪರ್ಧೆಗೆ ಸಾಕಷ್ಟು ಪೈಪೋಟಿ ಇದ್ದರೂ ಸ್ಥಳೀಯರನ್ನು ಕಡೆಗಣಿಸಿ ಅಚ್ಚರಿ ಅಭ್ಯರ್ಥಿಯನ್ನು ವರಿಷ್ಠರು ಕಣಕ್ಕಿಳಿಸಿರುವ ಲೆಕ್ಕಾಚಾರ ಜಿಲ್ಲಾ ವರಿಷ್ಠರನ್ನು, ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದೆ. ಮಾಜಿ ಎಂಎಲ್ಸಿ ಡಾ.ಎಂ.ಆರ್. ಹುಲಿನಾಯ್ಕರ್, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಸ್ಪರ್ಧೆಗೆ ಒಪ್ಪಿಕೊಂಡಿದ್ದ ಮಾಜಿ ಶಾಸಕ ಬಿ. ಸುರೇಶ್‌ಗೌಡ ಅವರನ್ನು ವರಿಷ್ಠರು ಕಡೆಗಣಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಗ್ರಾಪಂ ಸದಸ್ಯರಿಂದ ಬಿಜೆಪಿಗೆ ತಿರುಗೇಟು? : ಸುರೇಶ್‌ಗೌಡ ಪ್ರತಿನಿಧಿಸುವ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅತಿಹೆಚ್ಚು ಗ್ರಾಪಂ ಸದಸ್ಯರು ಚುನಾಯಿತರಾಗಿದ್ದು, ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕಳೆದ ಬಾರಿ 1,431 ಮೊದಲ ಪ್ರಾಶಸ್ತ್ಯ ಮತ ಪಡೆದಿದ್ದ ಕುರುಬ ಸಮುದಾಯದ ಡಾ.ಹುಲಿನಾಯ್ಕರ್ ಈ ಬಾರಿ ಗೆಲುವಿನ ನಿರೀಕ್ಷೆ ಹೊಂದಿದ್ದರು. ಆದರೆ, ಜೆಡಿಎಸ್, ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ ಮಣೆಹಾಕಿವೆ. ಆದ್ದರಿಂದ, ಅದರ ಲಾಭ ಪಡೆಯಲು ಪ್ರಬಲ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸುವ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದಾಗಿತ್ತು. ಸುರೇಶ್‌ಗೌಡ ಪ್ರಬಲ ಅಭ್ಯರ್ಥಿ ಆಗುತ್ತಿದ್ದರಾದರೂ ಪಕ್ಷದೊಳಗಿನ ‘ವೈರತ್ವ’ ಅವರಿಗೆ ಕೊನೇ ಘಳಿಗೆಯಲ್ಲಿ ಟಿಕೆಟ್ ಕೈತಪ್ಪುವಂತೆ ಮಾಡಿದೆ ಎನ್ನಲಾಗಿದೆ.

ಜೆಡಿಎಸ್‌ಗೆ ಸಂಘಟನೆಯೇ ಬಲ: ಜೆಡಿಎಸ್‌ನ ಅನಿಲ್ ರಾಜಕೀಯಕ್ಕೆ ಹೊಸ ಮುಖವಾಗಿದ್ದರೂ ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರನೆಲೆ ಇರುವುದರಿಂದ ಹಾಗೂ ಪಕ್ಷದ ವರಿಷ್ಠರೇ ಸ್ವತಃ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿರುವುದು ಲಾಭ ತಂದುಕೊಡುವ ಸಾಧ್ಯತೆ ಇದೆ. ಹಾಲಿ, ಮಾಜಿ ಶಾಸಕರಿಗೆ ಅತ್ತಇತ್ತ ಇಣುಕದಂತೆ ಬಿಗಿಮಾಡಲಿದ್ದಾರೆ. ಇದರಿಂದ ಅನಿಲ್ ಕಣದಲ್ಲಿ ಪ್ರಬಲ ಪೈಪೋಟಿ ಒಡ್ಡುವುದು ನಿಶ್ಚಿತವಾಗಿದೆ. ಸಂಘಟನೆಯಲ್ಲಿ ಬಿಜೆಪಿ ಉಳಿದ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಇದ್ದರೂ ಪರಿಷತ್ ಸಾರಥ್ಯವಹಿಸಿಕೊಂಡಿರುವ ಜಿಲ್ಲಾ ಸಚಿವ ಜೆ.ಸಿ. ಮಾಧುಸ್ವಾಮಿಗೆ ಗೆಲುವಿನ ಶ್ರೇಯ ತಪ್ಪಿಸಲು ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಒಟ್ಟಾರೆ ಈ ಬಾರಿಯ ಪರಿಷತ್ ಚುನಾವಣೆ ಮೂವರು ಯುವ ಸೇನಾನಿಗಳ ಕಾದಾಟಕ್ಕೆ ವೇದಿಕೆ ಒದಗಿಸಿದೆ.

ಪರಿಚಯ ಇಲ್ಲದ ಎನ್.ಲೋಕೇಶ್: ಬಿಬಿಎಂಪಿ ಮಾಜಿ ಸದಸ್ಯ, ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಲೋಕೇಶ್ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿದ್ದು ಕ್ಷೇತ್ರದಲ್ಲಿ ಅಷ್ಟೇನೂ ಚಿರಪರಿಚಿತರಲ್ಲ. ಮೂಲತಃ ಕೊರಟಗೆರೆ ತಾಲೂಕು ವಡ್ಡಗೆರೆಯವರಾದ ಲೋಕೇಶ್ ಬೆಂಗಳೂರಿನಲ್ಲಿ ಲ್ಯಾಂಡ್ ಡೆವಲಪರ್, ಕನ್‌ಸ್ಟ್ರಕ್ಷನ್ ಕ್ಷೇತ್ರದಲ್ಲಿದ್ದಾರೆ. ಹೊಸ ಮುಖವನ್ನು ಕ್ಷೇತ್ರಕ್ಕೆ ಕರೆತಂದಿರುವ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್.ಬಸವರಾಜು ಗೆಲುವಿಗೆ ಕಾರಣರಾಗಿದ್ದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ಋಣ ತೀರಿಸಲು ಹೊರಟಿದೆ ಎಂಬ ಮಾತುಗಳು ದಟ್ಟವಾಗಿವೆ. ಇದರಿಂದಾಗಿ ಬಿಜೆಪಿ-ಕಾಂಗ್ರೆಸ್ ಮ್ಯಾಚ್‌ಫಿಕ್ಸಿಂಗ್ ಮಾಡಿಕೊಂಡಿವೆ ಎಂಬ ವ್ಯಾಖ್ಯಾನಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ, ಒಳಒಪ್ಪಂದಗಳನ್ನು ಸಾರಸಗಾಟಾಗಿ ತಳ್ಳಿಹಾಕಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಪಕ್ಷದ ಅಭ್ಯರ್ಥಿಯನ್ನು ಗೆದ್ದೇ ಗೆಲ್ಲಿಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ.

ಕಾಂಗ್ರೆಸ್‌ಗೆ ರಾಜೇಂದ್ರ : ಪರಿಷತ್ ಚುನಾವಣೆ ಕೋಟಿಗಟ್ಟಲೇ ಖರ್ಚಿನ ಬಾಬ್ತು ಆಗಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ಇರಲಿಲ್ಲ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಲಗಾಮು ಹಾಕಲು ಸ್ವಪಕ್ಷೀಯರೇ ಕೆಲವರನ್ನು ಹುರಿದುಂಬಿಸಿ ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸುವಂತೆ ಮಾಡಿದ್ದರು. ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಅಂತಿಮವಾಗಿದ್ದು ಭಾನುವಾರ ಏರ್ಪಾಡಾಗಿರುವ ಕಾಂಗ್ರೆಸ್ ಜನ ಜಾಗರಣಾ ಸಮಾವೇಶ ಬಳಿಕ ಪಕ್ಷದ ವರಿಷ್ಠರು ಅಭ್ಯರ್ಥಿ ೋಷಿಸುವ ಸಾಧ್ಯತೆ ಇದೆ. ಮಾಜಿ ಶಾಸಕ ಆರ್.ನಾರಾಯಣ್, ಯಲಚವಾಡಿ ನಾಗರಾಜ್, ಇಮ್ತಿಯಾಜ್ ಅಹ್ಮದ್, ಕೆಂಚಮಾರಯ್ಯ ಹೆಸರು ಚಾಲ್ತಿಯಲ್ಲಿವೆ.

ಕಾರ್ಯಕರ್ತರನ್ನು ತುಳಿಯುತ್ತಲಿತ್ತೋ...! : ಪರಿಷತ್ ಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿಗೆ ಮಣೆ ಹಾಕಿದ್ದಕ್ಕೆ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ್ ವ್ಯಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ‘ಕುರುಡು ಕಾಂಚಾಣ ಕುಣಿಯುತಲಿತ್ತೋ... ಕಾರ್ಯಕರ್ತರನ್ನು ತುಳಿಯುತಲಿತ್ತೋ’ ಎಂದು ಬರೆದುಕೊಂಡಿರುವುದು ಪಕ್ಷದೊಳಗೆ ಬಂಡಾಯದ ಮುನ್ಸೂಚನೆ ನೀಡಿದೆ.