ಬೆಂಗಳೂರು: ಆನ್ಲೈನ್ ತರಗತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಪಾಲಕರೇ ಆನ್ಲೈನ್ ಕ್ಲಾಸ್ಗೆ ಮಕ್ಕಳನ್ನು ಸಜ್ಜುಗೊಳಿಸಲು ಸಿದ್ಧರಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು.. ತಜ್ಞರ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಡಾ. ಗುರುರಾಜ ಕರಜಗಿ, ಅಡ್ವಾನ್ಸಡ್ ಎಜುಕೇಷನಲ್ ಸರ್ವೀಸ್ ಎಂಬ ಸಂಸ್ಥೆ ಮೂಲಕ ನಡೆಸಿದ ಸಮೀಕ್ಷೆ ಈ ರೀತಿಯ ಆತಂಕಕಾರಿ ಅಂಶವನ್ನು ಹೊರ ಹಾಕಿದೆ.
ಆನ್ಲೈನ್ ತರಗತಿಗಾಗಿ ಪಾಲಕರು ಮಕ್ಕಳಿಗೆ ಲ್ಯಾಪ್ಟಾಪ್ ಅಥವಾ ಟ್ಯಾಬ್ ಕೊಡಿಸಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಶೇ.86 ಪಾಲಕರು ಹೌದು ಎಂಬ ಉತ್ತರ ನೀಡಿದ್ದಾರೆ. ಸ್ಮಾರ್ಟ್ಫೋನ್ ನೀಡಲು ಶೇ.86 ಪಾಲಕರು ಒಪ್ಪಿಗೆ ಸೂಚಿಸಿದ್ದು, ಪೂರ್ವಯೋಜಿತ ವಿಡಿಯೋ ಕಳುಹಿಸುವುದಕ್ಕೆ ಶೇ.69 ಮಂದಿ ಬೇಡ ಎಂದಿದ್ದಾರೆ.
ಕರೊನಾ ಸಮಯದಲ್ಲಿ ಪಾಲಕರು ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳುತ್ತೀರಾ ಎಂದರೆ ಶೇ.55 ಪಾಲಕರು ಸಾಧ್ಯವಿಲ್ಲವೆಂದು ಉತ್ತರಿಸಿದ್ದಾರೆ. ಕರೊನಾ ವೇಳೆ ಆನ್ಲೈನ್ ತರಗತಿ ಉತ್ತಮ ಲಾಭದಾಯಕವೇ ಎಂದು ಕೇಳಿದ್ದಕ್ಕೆ, ಶೇ.80 ಪಾಲಕರು ‘ಹೌದು’ ಎಂದಿದ್ದಾರೆ.
ನಗರದಲ್ಲಿರುವ 300ಕ್ಕೂ ಹೆಚ್ಚು ಶಾಲೆಗಳ 700ಕ್ಕೂ ಹೆಚ್ಚಿನ ಪಾಲಕರು ತಮ್ಮ ಅಭಿಪ್ರಾಯವನ್ನು ಈ ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ಸಮೀಕ್ಷೆಯ ಆನ್ಲೈನ್ ಪರವಾಗಿದೆ. ಇದು ನಗರದಲ್ಲಿರುವ ಪಾಲಕರಿಂದ ಮಾಹಿತಿ ಪಡೆದು ರೂಪಿಸಿರುವ ಸಮೀಕ್ಷೆಯಾಗಿದ್ದು, ಈ ಸಂಸ್ಥೆಯು ಇದೀಗ ಗ್ರಾಮೀಣ ಭಾಗದ ಪಾಲಕರಿಂದ ಮಾಹಿತಿ ಸಂಗ್ರಹಿಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಪಾಲಕರು ಆನ್ಲೈನ್ ಶಿಕ್ಷಣ, ಪೂರ್ವ ರೆಕಾರ್ಡ್ ಮಾಡಿದ ಚಿತ್ರೀಕರಣ, ಪಠ್ಯಕ್ರಮ ಪರಿಷ್ಕರಣೆ, ಪರೀಕ್ಷಾ ವಿನಾಯಿತಿ, ಶೈಕ್ಷಣಿಕ ವರ್ಷ ವಿಳಂಬ, ಸುರಕ್ಷತಾ ಕ್ರಮದ ಮೇಲೆ ಶಾಲೆ ಆರಂಭ, ಪರ್ಯಾಯ ಶಿಕ್ಷಣಕ್ಕೆ ಲಭ್ಯವಿರುವ ಸಾಧನ ಈ ಎಲ್ಲ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸಬಹುದಾಗಿದೆ. https://bit.ly/3ftaaUV ಲಿಂಕ್ ಬಳಕೆ ಮಾಡಿ ಭರ್ತಿ ಮಾಡಬಹುದು. ಇಲ್ಲವೆ, ವಾಟ್ಸ್ಆಪ್ ಸಂಖ್ಯೆಗೆ 9845259235 ಸಂದೇಶ ಕಳುಹಿಸಬಹುದಾಗಿದೆ.
ಕ್ಲಾಸ್ ಇಲ್ಲ ಅಂದ್ರೆ ಶಿಸ್ತು ಇಲ್ಲವಂತೆ
ಆನ್ಲೈನ್ ತರಗತಿ ಹೊರತಾಗಿ ಮಕ್ಕಳು ವ್ಯಾಪಕವಾಗಿ ಟಿವಿ ವೀಕ್ಷಣೆ ಅಥವಾ ಮೊಬೈಲ್ನಲ್ಲಿ ಆಟ ಆಡುವುದರತ್ತ ನಿರತರಾಗಿರುತ್ತಾರೆಯೇ ಎಂಬ ಪ್ರಶ್ನೆಗೆ ಶೇ.74 ಪಾಲಕರು ಹೌದು ಎಂದಿದ್ದಾರೆ. ಮತ್ತೊಂದು ದುರಂತ ಎಂದರೆ ಆನ್ಲೈನ್ ಕ್ಲಾಸ್ ಇಲ್ಲ ಎಂದರೆ ಮಕ್ಕಳು ಶಿಸ್ತು ಕಳೆದುಕೊಳ್ಳುತ್ತಾರೆಯೇ ಎಂದು ಕೇಳಿರುವುದಕ್ಕೆ ಶೇ.67 ಪಾಲಕರು ಹೌದು ಎಂದು ಉತ್ತರಿಸಿದ್ದಾರೆ.