ಜಿಲ್ಲೆ

ಪಾಲಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಿ

ಮುಂಡರಗಿ: ನಮ್ಮ ಸಮುದಾಯದ ಪ್ರತಿಯೊಂದು ಗ್ರಾಮದಲ್ಲಿನ ಪಾಲಕರು ಜಾಗೃತೆ ವಹಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಯುವಸಮೂಹ ದುಶ್ಚಟಗಳಿಗೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಮ್ಮ ಸಮುದಾಯ ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಹಿರಿಯರ ಹಾಗೂ ಪ್ರಜ್ಞಾವಂತರ ಮಾರ್ಗದರ್ಶನ ತುಂಬಾ ಅಗತ್ಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದುರಗಪ್ಪ ಹರಿಜನ ಹೇಳಿದರು.

ತಾಲೂಕಿನ ಡಂಬಳ ಗ್ರಾಮದಲ್ಲಿ ಮಾದಿಗ ಸಮುದಾಯದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ಜಯಂತ್ಯುತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾದಿಗ ಸಮುದಾಯದ ಹಿರಿಯ ಕೆ.ಎನ್. ದೊಡ್ಡಮನಿ ಮಾತನಾಡಿ, ಸ್ವಾತಂತ್ರ ದೊರೆತು ಏಳುವರೆ ದಶಕ ಕಳೆದರೂ ನಮ್ಮ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಶೋಷಣೆಗೆ ಒಳಗಾಗಿರುವುದಕ್ಕೆ ಪ್ರಮುಖ ಕಾರಣ ನಮ್ಮನ್ನು ಆಳುವ ಸರ್ಕಾರಗಳು. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಮರಿಯಪ್ಪ ಸಿದ್ದಣ್ಣವರ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಸೋಮಪ್ಪ ಹೈತಾಪೂರ ಮಾತನಾಡಿದರು. ಡಂಬಳ ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ ಮೆರವಣಿಗೆಗೆ ಚಾಲನೆ ನೀಡಿದರು.

ಗ್ರಾಪಂ ಮಾಜಿ ಅಧ್ಯಕ್ಷೆ ಮಂಜವ್ವ ಮಾದರ, ಸದಸ್ಯೆ ಹನಮವ್ವ ದೊಡ್ಡಮನಿ, ಮಹೇಶ ಗುಡ್ಡದ, ಹನಮಪ್ಪ ತಳಗೇರಿ, ನಿಂಗಪ್ಪ ಮಾದರ, ದುರಗಪ್ಪ ಗೋವಿನಕೊಪ್ಪ ಹಾಗೂ ಜೈ ಭೀಮ್ ಯುವಕರು, ಅಭಿಮಾನಿಗಳು ಸಂಘಟನೆ ಪದಾಧಿಕಾರಿಗಳು ಇತರರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಗೌಡಣ್ಣವರ ಕಾರ್ಯಕ್ರಮ ನಿರ್ವಹಿಸಿದರು.