ಹನುಮಸಾಗರ: ತಾಯಂದಿರು ಧಾರಾವಾಹಿಗಳನ್ನು ನೋಡುವುದನ್ನು ಬಿಡಬೇಕು. ನಿತ್ಯ ಸಂಜೆ ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಗಾಣದಾಳ ಹೇಳಿದರು.
ಇದನ್ನೂ ಓದಿ: ಮಕ್ಕಳಿಗೆ ಸಂವಿಧಾನ ಮಹತ್ವದ ಶಿಕ್ಷಣ ನೀಡಬೇಕು
ಸಮೀಪದ ತುಮರಿಕೊಪ್ಪ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುವಂತೆ ಮಾಡಲು ಶಿಕ್ಷಕರ ಜತೆಗೆ ಪಾಲಕರು ಕೈಜೋಡಿಸಬೇಕು. ಮನೆಯಲ್ಲಿ ತಾಯಂದಿರು ಸಂಜೆ ಎರಡು ಗಂಟೆ ಕಾಲ ಮಕ್ಕಳನ್ನು ಓದಲು ಬರೆಯಲು ಹಚ್ಚಬೇಕು. ಶಾಲೆಯಲ್ಲಿ ಏನು ಕಲಿಸಿದ್ದಾರೆ ಎಂದು ಕೇಳಬೇಕು.
ಶಿಕ್ಷಕರು ಮಕ್ಕಳ ಕಲಿಕಾ ಮಟ್ಟವನ್ನು ಗಮನದಲ್ಲಿ ಇಟ್ಟುಕೊಂಡು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಬೋಧನೆ ಮಾಡಬೇಕು. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ಪಾಲಕರು ಹಾಗೂ ಶಿಕ್ಷಕರು ಕಲಿಕೆಗೆ ಉತ್ತಮ ವಾತಾವರಣ ಸೃಷ್ಟಿಸಬೇಕು ಎಂದರು.
ಗ್ರಾಪಂ ಸದಸ್ಯರಾದ ಮರಿಯಪ್ಪ ಎಂ.ಗ್ವಾತಗಿ, ಮಹಾಂತೇಶ ಪೂಜಾರ, ಹನುಮೇಶ ಮೂಗನೂರು, ಮಹಾಂತೇಶ ಮಾದರ, ಮುಖ್ಯಶಿಕ್ಷಕ ಕಳಕಪ್ಪ ವಾಲಿ, ಗ್ರಾಪಂ ಅಧ್ಯಕ್ಷೆ ರೇಖಾ ಲಂಡೂರಿ, ಎಸ್ಡಿಎಂಸಿ ಉಪಾಧ್ಯಕ್ಷೆ ಶಿಲ್ಪಾ ಪೂಜಾರ, ಪ್ರಮುಖರಾದ ಮಹಾಂತೇಶ ಕಾಡದ, ಚಂದ್ರಶೇಖರ ಗ್ವಾತಗಿ, ಮಹಾಂತೇಶ ಅಡವಿಭಾವಿ, ನೂರಂದಪ್ಪ ಗ್ವಾತಗಿ ಇತರರಿದ್ದರು.