ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ನಾವು ಪ್ರತಿಷ್ಠಾನದಿಂದ ಆಯೋಜಿಸಿದ್ದ ಮಕ್ಕಳ ಬಾಲ್ಯ ಕಟ್ಟುವ ಹಬ್ಬದ ಶಿಬಿರಾರ್ಥಿಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಗ್ರಾಮೀಣ ಆಟಿಕೆಗಳ ಬಗ್ಗೆ ಜಾಗೃತಿ ಜಾಥಾ ನಡೆಸಿದರು. ಸುಮನ್, ಗೌತಮ್ ಇತರರು ಇದ್ದರು. 
ಜಿಲ್ಲೆ

ಮಕ್ಕಳಿಗೆ ಪಾಲಕರು ಒತ್ತಡ ಹೇರದಿರಿ

ಮಾದೇಶ್ ತಿ.ನರಸೀಪುರ

ಸೋಮವಾಪೇಟೆ: ನಾವು ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಮಕ್ಕಳ ಬಾಲ್ಯ ಕಟ್ಟುವ ಹಬ್ಬ’ ಹೆಸರಿನಲ್ಲಿ ಕಳೆದ 20 ದಿನಗಳಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಸೋಮವಾರ ಮುಕ್ತಾಯವಾಯಿತು.

‘ಮೊಬೈಲ್ ಬಿಡಿ, ಮೈದಾನಕ್ಕೆ ನಡಿ’ವಿಷಯದಲ್ಲಿ ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬರುವಂತೆ ಅನೇಕ ಗ್ರಾಮೀಣ ಆಟಗಳನ್ನು ಶಿಬಿರದಲ್ಲಿ ಹೇಳಿ ಕೊಡಲಾಯಿತು.

ಶಿಬಿರಾರ್ಥಿಗಳು ತಾವು ಕಲಿತ ಗ್ರಾಮೀಣ ಆಟಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ತಾವೇ ರಚಿಸಿದ ಚಿಕ್ಕಪುಟ್ಟ ಕವನಗಳನ್ನು ವಾಚಿಸಿ ಸಂಭ್ರಮಿಸಿದರು. ಮಕ್ಕಳು ಬಿಡಿಸಿದ ಕಾಲ್ಪನಿಕ ಚಿತ್ರಗಳನ್ನು ಪ್ರೇಮ್‌ನಲ್ಲಿ ಅಳವಡಿಸಿ ಪಾಲಕರಿಗೆ ನೀಡಲಾಯಿತು. ಶಿಬಿರದಲ್ಲಿ ಮಕ್ಕಳು ತಮ್ಮ ಕನಸುಗಳು ಹಾಗೂ ಗುರಿಯ ಬಗ್ಗೆ ಪಾಲಕರಿಗೆ ಬರೆದ ಪತ್ರಗಳನ್ನು ನೀಡಲಾಯಿತು.

ಗ್ರಾಮೀಣ ಆಟಗಳನ್ನು ಉಳಿಸುವ ನಿಟ್ಟಿನಲ್ಲಿ ಪೊಲೀಸ್ ರಕ್ಷಣೆಯಲ್ಲಿ ಜಾಗೃತಿ ಜಾಥಾ ಪಟ್ಟಣದ ಕೆಲ ರಸ್ತೆಯಲ್ಲಿ ಸಾಗಿತು. ಮಕ್ಕಳು ರಸ್ತೆಯಲ್ಲೇ ಬೇರಿಂಗ್ ಗಾಡಿಯನ್ನು ಚಲಾಯಿಸಿದರು. ಸೈಕಲ್ ಟಯರ್‌ಅನ್ನು ಮರದ ಕೋಲಿನಿಂದ ಚಲಾಯಿಸಿದರು. ವಿವಿಧ ಗ್ರಾಮೀಣ ಆಟಿಕೆಗಳನ್ನು ಮಕ್ಕಳು ಪ್ರದರ್ಶಿಸಿದರು. ವೇದಿಕೆಯಲ್ಲಿ ಮಕ್ಕಳು ಕಿರು ನಾಟಕಗಳನ್ನು ಪ್ರದರ್ಶಿಸಿದರು. ನೃತ್ಯ ಮಾಡಿ, ಹಾಡು ಹಾಡಿ ಪಾಲಕರಿಂದ ಚಪ್ಪಾಳೆ ಗಿಟ್ಟಿಸಿದರು.

ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯು ಮಾತನಾಡಿ, ಶಿಬಿರದಲ್ಲಿ ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಗಳು ಗುರಿ, ಸಾಧನೆ, ಕಲಿಕೆ, ಮೂಢನಂಬಿಕೆ, ವಿಜ್ಞಾನದ ಮಹತ್ವ, ಆರೋಗ್ಯ, ಸಾಮಾಜಿಕ ಕರ್ತವ್ಯಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸಿದ್ದಾರೆ ಎಂದು ಹೇಳಿದರು.

ಮನೆಯಲ್ಲಿ ಪಾಲಕರು ಮಕ್ಕಳಿಗೆ ನಿರ್ದಿಷ್ಟ ವಿಷಯದ ಬಗ್ಗೆ ಒತ್ತಡ ಹೇರಬಾರದು. ಮನೆ ಎಂಬುದು ತುಂಬ ಇಷ್ಟವಾದ ಸ್ಥಳವಾಗಿರುತ್ತದೆ. ಸಣ್ಣ ಪುಟ್ಟ ತಪ್ಪುಗಳನ್ನು ಮಾಡಲು ಬಿಡಬೇಕು. ನಿರ್ಬಂಧ ಹೇರಬಾರದು. ಮನೆಯೇ ಮೊದಲ ಪಾಠಶಾಲೆ, ತಂದೆ, ತಾಯಿ ಮೊದಲು ಗುರುಗಳು ಎಂಬುದನ್ನು ಯಾರೂ ಮರೆಯಬಾರದು ಎಂದು ಸಲಹೆ ನೀಡಿದರು.

ಮಕ್ಕಳ ಹಕ್ಕುಗಳ ಬಗ್ಗೆ ಹೇಳಿ ಕೊಡಲಾಗಿದೆ. ಪೊಲೀಸ್ ಇಲಾಖೆಗೆ ಹೋಗಿ ಸಂವಾದ ನಡೆಸಿದ್ದಾರೆ. ಸಾಧಕ ವ್ಯಕ್ತಿಗಳೊಂದಿಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.

ನಾವು ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಹಕ್ಕಿಗೊಂದು ಗುಟುಕು ಅಭಿಯಾನದಲ್ಲಿ ಭಾಗವಹಿಸಿ, ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಇಟ್ಟು, ಫೋಟೋ ಕಳುಹಿಸಿ ಬಹುಮಾನ ಗೆದ್ದ ವಿರಾಜಪೇಟೆಯ ಪೂಜಾ ಜಗತ್ ಮತ್ತು ಮೈಸೂರಿನ ಲಿಖಿತಾ ಅವರಿಗೆ ಬಹುಮಾನ ವಿತರಿಸಲಾಯಿತು. ನಾವು ಪ್ರತಿಷ್ಠಾನದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ಹಕ್ಕುಗಳ ಪ್ರತಿನಿಧಿಗಳಾದ ಪಿ.ಬಿ.ಪೊನ್ನಪ್ಪ, ಎಂ.ಜೆ.ಪ್ರಜ್ವಲ್, ರವಿಚಂದ್ರ, ಬಿ.ಕೆ.ಕುಮಾರಿ, ಶಶಿಕುಮಾರ್ ಅವರನ್ನು ಗೌರವಿಸಲಾಯಿತು.

ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು, ಕು. ಖುಷಿ, ಬಿಜ್ಜು ಕಾರ್ಯಕ್ರಮ ನಿರ್ವಹಿಸಿದರು.