ಜಿಲ್ಲೆ

ಪಾಲಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡಿಸಬೇಕು: ಡಾ.ಜಮೀರ್ ಅಹಮ್ಮದ್

ಮಡಿಕೇರಿ: ಮಕ್ಕಳಲ್ಲಿ ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವುದರ ಜತೆಗೆ ಶಿಕ್ಷಕರು ಮತ್ತು ಪಾಲಕರು ಸಂಸ್ಕಾರವನ್ನು ಮೂಡಿಸಬೇಕು ಎಂದು ಚಿಕ್ಕಅಳುವಾರದಲ್ಲಿನ ಕೊಡಗು ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಕರೆ ನೀಡಿದರು.


ನಗರದ ರೆಡ್ ಬ್ರಿಕ್ಸ್‌ನ ಸತ್ಕಾರ್ ಸಭಾಂಗಣದಲ್ಲಿ ಭಾನುವಾರ ಆಯೋಜಿತ, ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ವಿರಚಿತ ಅಂತರಗಂಗೆ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿಯ ಬಗ್ಗೆ ಮಾತನಾಡಿದರು.


ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವ ನಿಟ್ಟಿನಲ್ಲಿ ಒಳ್ಳೆಯ ಮಾಹಿತಿಯುಳ್ಳ ಕೃತಿಗಳು ತಮ್ಮದೇ ಕೊಡುಗೆ ನೀಡುತ್ತವೆ. ಬದುಕಿನ ನೈಜ ಸೌಂದರ್ಯ ಅನುಭವಿಸುಲ್ಲಿ ಕೃತಿಗಳು ಸಹಕಾರಿ ಎಂದು ಅನಿಸಿಕೆ ವ್ಯಕ್ತಪಡಿಸಿದ ಡಾ.ಜಮೀರ್ ಅಹಮ್ಮದ್, ಪುಸ್ತಕಗಳ ಓದಿನಿಂದ ಯುವಪೀಳಿಗೆಯ ಮನದಲ್ಲಿ ಸದ್ವಿಚಾರಗಳು ಮೂಡುತ್ತವೆ. ಇಂಥ ಯುವಪೀಳಿಗೆಯ ಸದ್ಬಳಕೆಯಿಂದ ಸದೃಡ ಭಾರತ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ೨೦೦೨ ರಿಂದ ಕನ್ನಡ ಸಾಹಿತ್ಯ ಪರಿಷತ್ ಕೊಡಗಿನ ಗೌರಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಗೆ ಈವರೆಗೂ ೨೧ ಲೇಖಕಿಯರು ಅರ್ಹರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಲೇಖಕಿಯರನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ. ಕೊಡಗು ಜಿಲ್ಲೆಯ ಲೇಖಕ, ಲೇಖಕಿಯರಿಂದ ರಚನಾತ್ಮಕ, ಗುಣಾತ್ನಕ ಕತಿಗಳು ಪ್ರಕಟವಾಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.


ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಮಾತನಾಡಿ, ಸಪ್ತನದಿಗಳಲ್ಲಿ ಪ್ರಮುಖಳಾಗಿರುವ ಗಂಗೆಯು ಪವಿತ್ರ ನದಿಯಾಗಿ ಖ್ಯಾತಿ ಪಡೆದಿದ್ದು, ಮನುಷ್ಯನ ಮನಸ್ಸನ್ನು ವಿಚಾರಗಳ ಮೂಲಕ ಶುಚಿಗೊಳಿಸುವಂಥ ಅಂಶಗಳು ಅಂತರಗಂಗೆಯಲ್ಲಿದೆ ಎಂದು ಶ್ಲಾಘಿಸಿದರು.


ಕೃತಿ ಲೋಕಾರ್ಪಣೆ ಮಾಡಿದ ಶನಿವಾರಸಂತೆಯ ಉಪನ್ಯಾಸಕಿ, ಸಾಹಿತಿ ಶ.ಗ ನಯನತಾರಾ ಮಾತನಾಡಿ, ನಿತ್ಯದ ಜೀವನದಲ್ಲಿ ಅನುಭವಿಸುವಂಥ ವಿಚಾರಗಳೊಂದಿಗೇ ವೈಚಾರಿಕ ಚಿಂತನೆಗಳ ಬರಹಗಳು ಅಂತರಗಂಗೆಯಲ್ಲಿ ಇದ್ದು, ಎಲ್ಲಾ ವಯಸ್ಸಿನವರ ಓದಿಗೂ ಸೂಕ್ತವಾಗಿದೆ. ಜೀವನದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಅಂತರಗಂಗೆಯಲ್ಲಿನ ಲೇಖನಗಳು ಗುಣಾತ್ನಕ ಅಂಶಗಳ ಮಾಹಿತಿಯೊಂದಿಗೆ ಮಾರ್ಗದರ್ಶನ ನೀಡುವಂತವು. ಮನಸ್ಸಿನ ಜಾಗ್ರತಿಗೆ ಕಾರಣವಾಗಬಲ್ಲಂಥ ಕಾರ್ಯ ಸಾಹಿತ್ಯ ಕಷಿಯಿಂದ ಉಂಟಾಗಬೇಕೆಂದು ಹೇಳಿದರು.


ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ.ಅನಿಲ್, ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಹಿತ್ಯಪರ ಒಲವಿನ ಗಾಳಿ ಬಲವಾಗಿ ಬೀಸುತ್ತಿದ್ದು, ಪ್ರತೀ ೧೫ ದಿನಕ್ಕೊಮ್ಮೆ ಹೊಸ ಕೃತಿಗಳು ಲೋಕಾರ್ಪಣೆಯಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲೇಖಕ, ಲೇಖಕಿಯರು ತಮ್ಮ ಕೃತಿ ಪ್ರಕಾಶನಕ್ಕೆ ಮುಂದಾಗುತ್ತಿದ್ದರೂ ಆಸಕ್ತ ಓದುಗರಿಗೆ ಇಂಥ ಕತಿಗಳನ್ನು ತಲುಪಿಸಲು ಸೂಕ್ತ ವ್ಯವಸ್ಥೆ ಇಲ್ಲದಾಗಿದೆ. ಈ ನಿಟ್ಟಿನಲ್ಲಿ ಕಸಾಪ ಸೇರಿದಂತೆ ಆಸಕ್ತ ಸಂಘಸಂಸ್ಥೆಗಳು ಮೂರು ತಿಂಗಳಿಗೊಮ್ಮೆಯಾದರೂ ಜಿಲ್ಲೆಯ ೫ ತಾಲೂಕಿನಲ್ಲಿ ಪುಸ್ತಕ ಸಂತೆ ಆಯೋಜಿಸುವ ಮೂಲಕ ಪ್ರಕಟಿತ ಪುಸ್ತಕಗಳನ್ನು ಓದುಗರು, ಸಂಶೋಧಕರು, ವಿದ್ಯಾರ್ಥಿಗಳು, ಶಿಕ್ಷಕವೃಂಧಕ್ಕೆ ತಲುಪಿಸುವ ಯೋಜನೆ ರೂಪಿಸುವಂತಾಗಬೇಕೆಂದರು.


ಕೇರಳದ ಮಂಜೇಶ್ವರದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಅರವಿಂದಾಕ್ಷ ಭಂಡಾರಿ ಮಾತನಾಡಿ, ಅಂತರರಾಜ್ಯದ ಗಡಿ ಭಾಗದಲ್ಲಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯುಂಟಾಗಿ ಶಾಲೆಗಳು ಮುಚ್ಚುವ ಹಂತ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಯುವಪೀಳಿಗೆಗೆ ಸಾಮಾಜಿಕ ಹೊಣೆಯ ವಿಚಾರ ತಿಳಿಸುವ ಕತಿ ಅಂತರಗಂಗೆಯಾಗಿದೆ. ಮಾದಕ ವ್ಯಸನಗಳಿಗೆ ದಾಸರಾಗುತ್ತಿರುವ ಯುವಜನಾಂಗದ ಬಗ್ಗೆ ಪೋಷಕರು ಈಗಿನಿಂದಲೇ ಎಚ್ಚರಗೊಳ್ಳದಿದ್ದರೆ ದುರಂತ ಕಾದಿದೆ ಎಂದು ಎಚ್ಚರಿಸಿದರು.


ಮಡಿಕೇರಿ ಆಕಾಶವಾಣಿಯ ಉದ್ಗೋಷಕ ಸುಬ್ರಾಯ ಸಂಪಾಜೆ, ಕೊಡಗು ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ, ಅಂತರಗಂಗೆ ಲೇಖಕಿ ಪ್ರತಿಮಾ ಹರೀಶ್ ರೈ ಮಾತನಾಡಿದರು. ಶಿಕ್ಷಕಿ ಕಾವೇರಮ್ಮ, ಪ್ರಮುಖರಾದ ಸೌಮ್ಯ ಸತೀಶ್ ರೈ, ಉಪನ್ಯಾಸಕಿ ಕೆ.ಜಯಲಕ್ಷ್ಮಿ ಇತರರಿದ್ದರು. ಸಭಾ ಕಾರ್ಯಕ್ರಮದ ನಂತರ ನಡೆದ ಗಾನಕಾವೇರಿ ತಂಡದ ಸಂಗೀತ ಕಾರ್ಯಕ್ರಮದಲ್ಲಿ ಜಿಲ್ಲೆಯ ಗಾಯಕ ಗಾಯಕಿಯರಾದ ಅನ್ವಿತ್, ಮೋಹನ್, ಅಜಿತ್, ಅಮೃತ್ ರಾಜ್, ಸ್ನೇಹ ಮಧುಕರ್, ರಚನ್ ಪೊನ್ನಪ್ಪ, ಬಿ.ಜಿ.ಅನಂತಶಯನ, ಅವರುಗಳಿಂದ ವೈವಿಧ್ಯಮಯ ಹಾಡುಗಾರಿಕೆ ಜನಮನ ಸೆಳೆಯಿತು.