ಜಿಲ್ಲೆ

ಮಕ್ಕಳಿಗೆ ಪಾಲಕರು ಸಮಯ ನೀಡಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ತರಗತಿಗಳಲ್ಲಿ ಶಿಕ್ಷಕರು ಹೇಳಿಕೊಡುವುದನ್ನು ಆಸಕ್ತಿಯಿಂದ ಕಲಿಯುವಂತೆ ಪ್ರೇರೇಪಿಸಬೇಕು. ಜತೆಗೆ ಪಾಲಕರು ಮನೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಸಮಯ ಕೊಡುವುದು ಬಹಳ ಮುಖ್ಯ ಎಂದು ಹು-ಧಾ ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ್​ ಹೇಳಿದರು.

ನಗರದ ಭೈರಿದೇವರಕೊಪ್ಪದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉತ್ತಮ ಅಂಕಗಳನ್ನು ಗಳಿಕೆಯೊಂದಿಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳ ಬಗ್ಗೆ ಸದಾ ಕಾಳಜಿ ವಹಿಸಬೇಕು ಎಂದರು.

ಶಾಲೆಯ ಗೌರವ ನಿರ್ದೇಶಕ ಡಾ. ವಿ.ಎಸ್​.ವಿ. ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕಲಿಕೆ ಜತೆಗೆ ಸಾಂಸ್ಕೃತಿಕ ಮೌಲ್ಯ ಅಳವಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು. ಸಮಯ ಅಮೂಲ್ಯವಾದದ್ದು. ಅದನ್ನು ವ್ಯರ್ಥ ಮಾಡದೆ, ಕಲಿಕೆ, ಸ್ವವಿಕಾಸ ಹಾಗೂ ಉತ್ತಮ ಭವಿಷ್ಯದ ನಿಮಾರ್ಣಕ್ಕಾಗಿ ಬಳಸಿಕೊಳ್ಳಬೇಕು ಎಂದರು.

ಸಾನಿಧ್ಯ ವಹಿಸಿದ್ದ ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ, ಬಿಇಒ ಉಮೇಶ ಬೊಮ್ಮಕ್ಕನವರ, ಶಾಲೆ ಪ್ರಾಚಾರ್ಯೆ ಶರ್ಮಿಳಾ ಹೊಸೂರ ಮಾತನಾಡಿದರು.

ಸಂಸ್ಥೆ ಎಂಡಿ ವೀರಭದ್ರರಾವ್​, ಅಧ್ಯಕ್ಷ ಜಗನ್​ ಮೋಹನರಾವ್​, ಎಂ. ಶ್ರಿಕಾಂತ, ಅಜ್ಜಪ್ಪ ಹೊರಕೇರಿ, ಶಿಕ್ಷಕರು, ಇತರರು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಲಾಯಿತು.