ಜಿಲ್ಲೆ

ಪಾಲಕರು ಜಾಗೃತಿ ವಹಿಸಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿ ಅತಿಸಾರದಿಂದ ನಿರ್ಜಲೀಕರಣ ಉಂಟಾಗಿ ಜೀವಕ್ಕೆ ಅಪಾಯವಾಗಬಹುದು. ಪಾಲಕರು ನಿರ್ಲಕ್ಷೃ ವಹಿಸದೆ ಜಾಗೃತರಾಗಿ, ನಿಗದಿತ ಪ್ರಮಾಣದ ಓಆರ್‌ಎಸ್ ದ್ರಾವಣ ಮತ್ತು ಝಿಂಕ್ ಮಾತ್ರೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆಯ ತಾಯಿ ಮಕ್ಕಳ ಆಸ್ಪತ್ರೆ ವಾರ್ಡ್‌ದಲ್ಲಿ ಬುಧವಾರ ಏರ್ಪಡಿಸಿದ್ದ ತೀವ್ರತರ ಅತಿಸಾರ ನಿಯಂತ್ರಣ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಹಾಗೂ ಸ್ಯಾನ್ಸ್ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತಿಸಾರದಿಂದ ನಿರ್ಜಲೀಕರಣವಾಗಿ ಮಕ್ಕಳಿಗೆ ಮಾರಣಾಂತಿಕವಾಗಬಹುದು. ಇದನ್ನು ಸರಿಯಾದ ಪ್ರಮಾಣದಲ್ಲಿ ಓಆರ್‌ಎಸ್ ಮತ್ತು ಝೀಂಕ್ ಮಾತ್ರೆಗಳನ್ನು ನೀಡುವ ಮೂಲಕ ತಡೆಯಬಹುದು. ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಮೂಲ ಉದ್ದೇಶವು ಅತಿಸಾರ ಭೇದಿಯಿಂದ ಬಾಲ್ಯದ ಸಾವುಗಳ ಶೂನ್ಯಗೊಳಿಸುವುದರ ಕಡೆಗೆ ಆಗಿದೆ ಎಂದರು.
ನ. 15ರಿಂದ 21ರವರೆಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಆಚರಿಸಲಾಗುತ್ತಿದೆ. ಸಪ್ತಾಹವು ಸಮುದಾಯ ಸೌಲಭ್ಯ ತೊಡಗಿಸಿಕೊಳ್ಳುವಿಕೆ ಮೂಲಕ ಶಿಶುವನ್ನು ಪೋಷಿಸುವುದು ಎಂಬ ವಿಷಯ ವಸ್ತು ಒಳಗೊಂಡಿದೆ. ನವಜಾತ ಶಿಶುವಿಗೆ ಉತ್ತಮ ಆರೈಕೆ ನೀಡುವ ಮರಣ ಪ್ರಮಾಣ ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಗರ್ಭಿಣಿಯರು, ನವಜಾತ ಪಾಲಕರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ ಮಾತನಾಡಿ, ಮಕ್ಕಳಲ್ಲಿ ಅತಿಸಾರ ಉಂಟಾಗದಂತೆ ಮಾಡುವಲ್ಲಿ ಶುಚಿತ್ವದ ಪಾತ್ರ ಮುಖ್ಯ. ಆಹಾರ ತಯಾರಿಕೆ, ಕೈ, ಬಟ್ಟೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಮಕ್ಕಳಲ್ಲಿ ಅತಿಸಾರ ಉಂಟಾಗದಂತೆ ನೋಡಿಕೊಳ್ಳಬಹುದು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಅಧ್ಯಕ್ಷತೆ ವಹಿಸಿದ್ದರು. ಅತಿಸಾರದ ಕಾರಣಗಳು ಮತ್ತು ಮುನ್ನೆಚ್ಚರಿಕೆ, ಚಿಕಿತ್ಸೆ ಕುರಿತು ಮಕ್ಕಳ ತಜ್ಞ ವೈದ್ಯ ಡಾ.ಸಿ.ಎನ್. ನಾಡಗೌಡ ಮಾತನಾಡಿದರು.
ಡಾ.ಟಿ.ಎ. ಶೆಪೂರ, ಡಾ. ಪ್ರಸನ್ನ, ಡಾ.ವಿಕ್ರಮ ಗೌಡರ, ಡಾ. ಫಿರ್ದೋಷ ಖಾನ್, ಜಿಲ್ಲಾ ಆಸ್ಪತ್ರೆ ತಜ್ಞ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ತಾಯಂದಿರು, ಪಾಲಕರು, ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳು, ಇತರರು ಇದ್ದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸುಜಾತಾ ಹಸವಿಮಠ ಸ್ವಾಗತಿಸಿದರು. ರೇಣುಕಾ ಮಲ್ಲನಗೌಡರ ನಿರೂಪಿಸಿದರು. ಅಶೋಕ ಬೆಟದೂರ ವಂದಿಸಿದರು.