ಜಿಲ್ಲೆ

ಸಾರ್ಕಾರಿ ಶಾಲೆ ಉಳಿಯಲು ಪಾಲಕರ ಪಾತ್ರ ಹಿರಿದು

ಹಲಗೂರು: ಗ್ರಾಮೀಣ ಪ್ರದೇಶದ ಮಕ್ಕಳ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಸಂತಸದ ವಿಚಾರ ಎಂದು ಶಿಕ್ಷಣ ಸಂಯೋಜಕ ಟಿ.ಎಂ.ರವಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಹಲಗೂರು ಸಮೀಪದ ಅಂತರವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳು ಉಳಿಯಲು, ಮುನ್ನಡೆಸಲು ಗ್ರಾಮದ ಸಾರ್ವಜನಿಕರ ಸಹಕಾರ ಅತಿ ಮುಖ್ಯ, ಗ್ರಾಮೀಣ ಪ್ರದೇಶದ ಶಿಕ್ಷಣ ಆಸಕ್ತರ ಸಹಕಾರದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯ ಸಹಕಾರ ಇರಲಿ ಎಂದರು.

ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸೋಮಣ್ಣ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ತಜ್ಞ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಹಲವು ಯೋಜನೆಗಳ ಅಡಿಯಲ್ಲಿ ಉತ್ತಮ ಸೌಲಭ್ಯ ದೊರೆಯುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮದ ಶಿಕ್ಷಣಾಸಕ್ತರಾದ ಎ.ಎಸ್.ದೇವರಾಜು ಮಾತನಾಡಿ, ಐದು ಮಕ್ಕಳಿಂದ ಶಾಲೆ ಮುಚ್ಚುವ ಹಂತ ತಲುಪಿತ್ತು. ಗ್ರಾಮದ ಪಾಲಕರ ಸಹಕಾರದಿಂದ ಮತ್ತೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಳ ಕಂಡಿದೆ. ಶಾಲೆಗೆ ಬೇಕಾದ ಅಗತ್ಯ ವಸ್ತುಗಳನ್ನು ದಾನಿಗಳು ನೀಡುತ್ತಾ ಬಂದಿದ್ದು, ಅವರಿಗೆ ಧನ್ಯವಾದ ತಲುಪಿಸುವೆ ಎಂದರು.

ಶಾಲಾ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಬಹುಮಾನ ವಿತರಣೆ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳಾ, ಸುಂದರಮ್ಮ, ಅರ್ಜುನ, ನಾಗರಾಜು, ಸಿ.ಆರ್.ಪಿ.ರೇವಣ್ಣ, ಜಿ.ಎಸ್.ಕೃಷ್ಣ, ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ, ರಾಜಮಣಿ, ಶಿಕ್ಷಕರಾದ ಹೇಮಲತಾ, ಭಾಗ್ಯಮ್ಮ, ಆಶಾ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಉಮೇಶ್, ಸದಸ್ಯರಾದ ಗೀತಾಂಜಲಿ, ಸಬ್ಬನಹಳ್ಳಿ ಕುಮಾರ್, ಗ್ರಾಮ ಸಹಾಯಕ ಎ.ಎಸ್.ಶಿವಕುಮಾರ್ ಇತರರು ಇದ್ದರು.