ಜಿಲ್ಲೆ

ಋಷಿಶ್ರೀ ವಿದ್ಯಾನಿಕೇತನ ವಿರುದ್ಧ ಪಾಲಕರ ಪ್ರತಿಭಟನೆ

ರಾಜಣ್ಣ


ಹೋಳೆನರಸೀಪುರ: ತಾಲೂಕಿನ ಎಲೆಚಾಗಳ್ಳಿ ಮಾರ್ಗದಲ್ಲಿರುವ ಋಷಿಶ್ರೀ ವಿದ್ಯಾನಿಕೇತನ ಕಾರ್ಯದರ್ಶಿ ಧೋರಣೆ ವಿರೋಧಿಸಿ ವಿದ್ಯಾರ್ಥಿಗಳ ಪಾಲಕರು ಸೋಮವಾರ ಶಾಲೆಯ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ ಈ ಹಿಂದೆ ಆಗಿದ್ದ ಒಪ್ಪಂದದಂತೆ ಹಣ ಹಿಂದಿರುಗಿಸುವಂತೆ ಆಗ್ರಹಿಸಿದರು.


ಪಾಲಕ ವಕೀಲ ಪ್ರಶಾಂತ್ ಮಾತನಾಡಿ, ಈ ಶಾಲೆ ಪ್ರಾರಂಭವಾದಾಗ ಎಲ್‌ಕೆಜಿಗೆ ಸೇರಿಸುವ ಒಬ್ಬ ವಿದ್ಯಾರ್ಥಿಗೆ 1ಲಕ್ಷ ರೂ.ಪಾವತಿಸಿದರೆ ಆ ವಿದ್ಯಾರ್ಥಿ 10ನೇ ತರಗತಿ ಓದುವವರೆಗೂ ಉಚಿತ ಶಿಕ್ಷಣ ನೀಡುತ್ತೇವೆ ಹಾಗೂ ವಿದ್ಯಾರ್ಥಿ ಕಾರಣಾಂತರಗಳಿಂದ ಶಾಲೆಯನ್ನು ಮಧ್ಯದಲ್ಲೇ ಬಿಟ್ಟರೂ ಹಣ ಹಿಂದಿರುಗಿಸುತ್ತೇವೆ ಎಂದು ಎಲ್ಲ ಪಾಲಕರಿಗೂ
ಛಾಪಾ ಕಾಗದದಲ್ಲಿ ಅಗ್ರಿಮೆಂಟ್ ಬರೆದುಕೊಟ್ಟು ಒಬ್ಬ ವಿದ್ಯಾರ್ಥಿಗೆ 1ಲಕ್ಷ ರೂ.ನಂತೆ ಹಣ ಕಟ್ಟಿಸಿಕೊಂಡಿದ್ದರು. ಆದರೆ ಈಗ ಮತ್ತೆ ಪ್ರತೀ ವರ್ಷ 35 ಸಾವಿರ ರೂ.ಶುಲ್ಕ ಕಟ್ಟಬೇಕು ಎನ್ನುತ್ತಿದ್ದಾರೆ.


ಕಳೆದ ವರ್ಷ 5 ಸಾವಿರ ರೂ.ಪಡೆದಿದ್ದರು ಯಾವುದೇ ರಶೀದಿ ನೀಡಿರಲಿಲ್ಲ. ಈಗ 35 ಸಾವಿರ ರೂ. ಕಟ್ಟಲೇಬೇಕು. ಹಣ ಪಾವತಿಸದಿದ್ದರೆ ಟಿ.ಸಿ.ನೀಡುವುದಿಲ್ಲ, ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರ ನೀಡುವುದಿಲ್ಲ ಎನ್ನುತ್ತಿದ್ದಾರೆ ಎಂದು ದೂರಿದರು.


ನಾವು ಈ ಬಗ್ಗೆ ಕೇಳಲು ಬಂದರೆ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಸುರೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು ಸಿಗುವುದಿಲ್ಲ, ನಮ್ಮ ಕರೆಗಳನ್ನು ಸ್ವೀಕರಿಸುವುದೂ ಇಲ್ಲ. ಮುಖ್ಯಶಿಕ್ಷಕರನ್ನು ಕೇಳಿದರೆ ಉದ್ದಟತನದ ವರ್ತನೆ ತೋರಿಸುತ್ತಾರೆ. ಪೊಲೀಸರನ್ನು ಕರೆಸಿ ಹೆದರಿಸುತ್ತಾರೆ. ಆದ್ದರಿಂದ ಈ ಬಾರಿ ನಾವು ಅನಿವಾರ್ಯವಾಗಿ ಸಂಘಟಿತರಾಗಿ ಬಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.


ಪಾಲಕರಾದ ಉಷಾ ಮಾತನಾಡಿ, ನಮ್ಮ ಮಕ್ಕಳನ್ನು 1ಲಕ್ಷ ರೂ.ನೀಡಿ ಇಲ್ಲಿಗೆ ಸೇರಿಸಿದ್ದೆವು. ನಮ್ಮ ಮಕ್ಕಳಿಗೆ ಆದರ್ಶ ಶಾಲೆಯಲ್ಲಿ ಪ್ರವೇಶ ಸಿಕ್ಕಿತು, ನಾವು ಅಲ್ಲಿಗೆ ಸೇರಿಸಿದೆವು. ಆದರೆ ನಮ್ಮ ಹಣವನ್ನು ಇನ್ನೂ ಹಿಂದಿರುಗಿಸಿಲ್ಲ ಎಂದು ಕಣ್ಣೀರು ಹಾಕಿದರು.


ಪಾಲಕರಾದ ಶಶಿಕಲಾ, ತೇಜಸ್ವಿನಿ, ಸುಮಿತ್ರಾ, ಸುಬ್ರಹ್ಮಣ್ಯ, ವಕೀಲರಾದ ವಸಂತ್‌ಕುಮಾರ್, ವಕೀಲರಾದ ಶಿವಣ್ಣ ಸೇರಿದಂತೆ 50 ಕ್ಕೂ ಹೆಚ್ಚು ಪಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಆಡಳಿತ ಮಂಡಳಿಯ ಕಾರ್ಯದರ್ಶಿ ಸುರೇಶ್ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆ ಬಗೆಹರಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.


ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣೆ ಎಸ್‌ಐ ಜಿ. ಎಸ್.ರಕ್ಷಿತಾ, ಮೊದಲು ನೀವು ದೂರು ಕೊಡಿ, ಕಾರ್ಯದರ್ಶಿಯವರನ್ನು ಕರೆಸುತ್ತೇನೆ ಎಂದು ಪ್ರತಿಭಟನಾಕಾರರಿಂದ ದೂರು ಸ್ವೀಕರಿಸಿದರು.
ಕಾರ್ಯದರ್ಶಿ ಸುರೇಶ್ ಮಂಗಳವಾರ ಬೆಳಗ್ಗೆ 11 ಗಂಟೆಗೆ ಬರುತ್ತೇನೆ ಎಂದು ದೂರವಾಣಿ ಮೂಲಕ ಭರವಸೆ ನೀಡಿದ ಕಾರಣ ಪಾಲಕರು ಪ್ರತಿಭಟನೆ ಹಿಂದಕ್ಕೆ ಪಡೆದರು.