ವಿಜಯವಾಣಿ ಸುದ್ದಿಜಾಲ ಹಾಸನ
ಚನ್ನರಾಯಪಟ್ಟಣ ತಾಲೂಕಿನ ಎಂ.ಶಿವರ ಗ್ರಾಮದಲ್ಲಿ ಶುಕ್ರವಾರ ಅಪ್ರಾಪ್ತೆಯ ನಿಶ್ಚಿತಾರ್ಥ ತಡೆದ ಮಕ್ಕಳ ಸಹಾಯವಾಣಿ ಸಿಬ್ಬಂದಿ ಹೇಮಂತ್‌ಕುಮಾರ್ ಹಾಗೂ ಪದ್ಮಾ ಅವರನ್ನು ಪಾಲಕರು ಮತ್ತು ಅವರ ಕಡೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದರು.
ಗ್ರಾಮದ 16 ವರ್ಷದ ಅಪ್ರಾಪ್ತೆ ಜತೆಗೆ ಸಮೀಪದ ಮಾದುಗೊಡನಹಳ್ಳಿಯ ಶ್ರೀಧರ್ (31) ಎಂಬಾತನ ಜತೆಗೆ ನಿಶ್ಚಿತಾರ್ಥ ಹಮ್ಮಿಕೊಳ್ಳಲಾಗಿತ್ತು. ಆತನಿಗೆ ಇದು ಎರಡನೇ ವಿವಾಹವಾಗಿದ್ದು, ಈ ನಿಶ್ಚಿತಾರ್ಥವನ್ನು ತಪ್ಪಿಸಿ ಎಂದು ಗ್ರಾಮಸ್ಥರೊಬ್ಬರು ಮಕ್ಕಳ ಸಹಾಯವಾಣಿಯನ್ನು ಕೋರಿದ್ದರು. ಹಾಗಾಗಿ, ಸಹಾಯವಾಣಿ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಎಂ.ಶಿವರ ಗ್ರಾಮಕ್ಕೆ ತೆರಳಿದ್ದರು.
ಹೇಮಂತ್‌ಕುಮಾರ್ ಹಾಗೂ ಪದ್ಮಾ ಮನೆಗೆ ಭೇಟಿ ನೀಡಿ ವಿಚಾರಿಸುತ್ತಿದ್ದಂತೆ ಗ್ರಾಮದ ಸುರೇಶ್ ಹಾಗೂ ರಂಗಸ್ವಾಮಿ ಎಂಬುವರು ಏಕಾಏಕಿ ವಾಗ್ವಾದ ಪ್ರಾರಂಭಿಸಿದ್ದಾರೆ. ಬಾಲ್ಯ ವಿವಾಹ ತಪ್ಪು ಎನ್ನಲು ನೀವ್ಯಾರು ? ಈ ಮಾಹಿತಿ ನಿಮಗೆ ನೀಡಿದ್ದು ಯಾರು ಎಂದು ಏರುದನಿಯಲ್ಲಿ ಪ್ರಶ್ನಿಸುತ್ತಾ ಮೈಮೇಲೆ ಬಿದ್ದಿದ್ದಾರೆ.
ಗ್ರಾಮದಿಂದ ಎರಡು ಕಿ.ಮೀ. ದೂರದ ತೋಟದ ಮನೆಯಲ್ಲಿ ನಿಶ್ಚಿತಾರ್ಥ ನಡೆಯುತ್ತಿತ್ತು. 30 ರಿಂದ 40 ಜನ ಏಕಾಏಕಿ ನಮ್ಮ ಮೇಲೆ ಮುಗಿಬಿದ್ದರು. ಪದ್ಮಾ ಅವರ ಮಾಸ್ಕ್ ಕಿತ್ತೆಸೆದು ಮೊಬೈಲ್ ಕಸಿದುಕೊಂಡರು. ಕೈಯಲ್ಲಿದ್ದ ಡೈರಿಯನ್ನು ಕಸಿದು ಅದರ ಹಾಳೆಗಳನ್ನು ಹರಿದು ಹಾಕಿದರು ಎಂದು ಹೇಮಂತ್‌ಕುಮಾರ್ ಪತ್ರಿಕೆಗೆ ತಿಳಿಸಿದರು.
ತಕ್ಷಣ ಸಿಬ್ಬಂದಿ ಚನ್ನರಾಯಪಟ್ಟಣ ಸಿಡಿಪಿಒ ವಿಜಯಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರ ಮುಟ್ಟಿಸಿದರು. ಅವರು ಗ್ರಾಮಾಂತರ ಠಾಣೆ ಪೊಲೀಸರ ಜತೆಗೆ ಸ್ಥಳಕ್ಕೆ ತೆರಳಿದರು. ಪೊಲೀಸರು ಬರುವ ವಿಷಯ ತಿಳಿದ ಕುಟುಂಬಸ್ಥರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪಾಲಕರಿಗೆ ಸೋಮವಾರ ತಾಲೂಕು ಕಚೇರಿಗೆ ಹಾಜರಾಗುವಂತೆ ಸೂಚಿಸಿ ಅಧಿಕಾರಿಗಳು ಅಲ್ಲಿಂದ ವಾಪಸಾಗಿದ್ದಾರೆ.
ನಿಶ್ಚಿತಾರ್ಥ ವಿಷಯ ತಿಳಿದು ಮಕ್ಕಳ ಸಹಾಯವಾಣಿ ಸಿಬ್ಬಂದಿ ತೆರಳಿದಾಗ ಗಲಾಟೆ ನಡೆದಿದೆ. ಆದರೆ ಕುಟುಂಬಸ್ಥರು ಗೃಹ ಪ್ರವೇಶ ನಡೆಯುತ್ತಿದ್ದು ಯಾವುದೇ ನಿಶ್ಚಿತಾರ್ಥವಿಲ್ಲ ಎಂದು ಹೇಳಿದರು. ಅಗತ್ಯ ದಾಖಲೆಗಳೊಂದಿಗೆ ಸೋಮವಾರ ಕಚೇರಿಗೆ ಬರುವಂತೆ ಸೂಚಿಸಿದ್ದೇನೆ.
ವಿಜಯಕುಮಾರ್, ಸಿಡಿಪಿಒ ಚನ್ನರಾಯಪಟ್ಟಣ
ಪೊಲೀಸರು ಕಾಪಾಡಿದರು
ಪೊಲೀಸರು ಬರುವುದು ಸ್ವಲ್ಪ ತಡವಾಗಿದ್ದರೂ ಸಿಬ್ಬಂದಿ ಪ್ರಾಣಕ್ಕೆ ಕುತ್ತು ಇತ್ತು. ಬೆಳಗ್ಗೆ 11 ರಿಂದ ಸಂಜೆ 4ರ ವರೆಗೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ರೈತ ಸಂಘದ ಮುಖಂಡ ಎಂದು ಹೇಳಿಕೊಂಡ ಸುರೇಶ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಒಳ್ಳೆಯ ಉದ್ದೇಶದಿಂದ ಬಂದಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯ ಎಂದು ಗ್ರಾಮಸ್ಥರು ಹೇಳಿದರು.
ಮಕ್ಕಳ ಸಹಾಯವಾಣಿ ಸಿಬ್ಬಂದಿ ಮೇಲೆ ದರ್ಪ ಮೆರೆದ ಸುರೇಶ್.
29ಎಚ್‌ಎಸ್ 2
ಚಿತ್ರ