ಜಿಲ್ಲೆ

ಶಿಕ್ಷಕರ ವರ್ಗಾವಣೆ ರದ್ದುಗೊಳಿಸುವಂತೆ ಶಾಲೆಗೆ ಬೀಗ ಹಾಕಿದ ವಿದ್ಯಾರ್ಥಿಗಳ ಪಾಲಕರು

ಬ್ಯಾಡಗಿ: ಶಿಕ್ಷಕರ ವರ್ಗಾವಣೆಯನ್ನು ತುರ್ತಾಗಿ ರದ್ದುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಕುಮ್ಮೂರು ಗ್ರಾಮದ ಪಾಸಿ ಪ್ರಭಾವತಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪಾಲಕರು ಶಾಲೆಗೆ ಬೀಗ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.


ತಾ.ಪಂ. ಮಾಜಿ ಸದಸ್ಯ ಮಹೇಶಗೌಡ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಪ್ರತಿ ವರ್ಷ ಉತ್ತಮ ಪಲಿತಾಂಶ ಪಡೆದ ಶಾಲೆ ಇದು. ದಾನಿಗಳ ಸಹಕಾರದಿಂದ ಸಾಕಷ್ಟು ಪ್ರತಿಭಾವಂತರಿಗೆ ಅನುಕೂಲವಾಗಿದೆ.

2007ರಲ್ಲಿ ಆರಂಭವಾದ ಪ್ರೌಢಶಾಲೆಯಲ್ಲಿ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಈಗ ಈ ಶಾಲೆಯ ಚಿತ್ರಕಲಾ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿಗೆ ಹಿನ್ನೆಡೆಯಾಗಲಿದೆ.

ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರ ಅಗತ್ಯವಿದೆ. ಕೂಡಲೆ ಈಗಿನ ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.


ಶಾಲೆಯಿಂದ ಹೊರಗಳಿದ ವಿದ್ಯಾರ್ಥಿಗಳು

ಗ್ರಾಮಸ್ಥರು ಹಾಗೂ ಪಾಲಕರು ಸುಮಾರು ಎರಡು ತಾಸು ಪ್ರತಿಭಟನೆ ನಡೆಸಿದ ಪರಿಣಾಮ ಮಕ್ಕಳು ಪಾಠ ಬಿಟ್ಟು ಶಾಲಾ ಆವರಣದಲ್ಲಿ ಕುಳಿತಿದ್ದರು.
ಪ್ರತಿಭಟನೆ ನಿರತ ಪಾಲಕರ ಬಳಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮಲ್ಲೇಶಪ್ಪ ಮಾತನಾಡಿ, ಶಿಕ್ಷಣ ಇಲಾಖೆಯ ನಿಯಮದಂತೆ ವರ್ಗಾವಣೆಯಾಗಿದೆ. ಪಾಲಕರು ರದ್ದುಗೊಳಿಸಲು ಒತ್ತಡ ಹಾಕುತ್ತಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು. ಇದರಿಂದ ಪ್ರತಿಭಟನಾಕಾರರು ಶಾಲೆಯ ಬೀಗ ತೆರೆದರು.
ಗ್ರಾಮಸ್ಥರಾದ ಸುಭಾಷ ಮಣ್ಣಪ್ಪನವರ, ವೀರಭದ್ರಗೌಡ ಪಾಟೀಲ, ಹರೀಶ ಬಾರಂಗಿ, ರವಿ ಬ್ಯಾಡಗಿ, ಹನುಮಂತ ಬನ್ನಿಹಟ್ಟಿ, ಅಶೋಕ ಹಿರೇಹಳ್ಳಿ, ನಾಗಪ್ಪ ಬೆಣಗೇರಿ, ಚನಬಸಪ್ಪ ದಾಸರ, ಮಾರುತಿ ಕಾಳಪ್ಪನವರ ಇದ್ದರು.