ಬಸವಕಲ್ಯಾಣ: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜತೆಗೆ ಪಾಲಕರ ಪಾತ್ರವೂ ಮಹತ್ವದ್ದು ಎಂದು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಶರಣಬಸಪ್ಪ ದಂಡೆ ಹೇಳಿದರು.
ಖಾನಾಪುರ(ಕೆ) ಸಮೀಪದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪಾಲಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ಸರ್ಕಾರ ನಾನಾ ಯೋಜನೆಗಳನ್ನು ರೂಪಿಸಿದ್ದು, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಕ್ಕಳ ಸರ್ವಾಗೀಣ ವಿಕಾಸಕ್ಕೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ವಸತಿ ಶಾಲೆಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಲಾಗುತ್ತಿದೆ. ಶಾಲೆ ಆವರಣದಲ್ಲಿ ಓಪನ್ ಜಿಮ್ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಶಶಿಧರ ಪಾಟೀಲ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಸರ್ಕಾರ ವಸತಿ ಶಾಲೆಗಳನ್ನು ಆರಂಭಿಸಿದ್ದು, ಇಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಜತೆಗೆ ಶಿಕ್ಷಣಕ್ಕೆ ಅಗತ್ಯವಾದ ಶೈಕ್ಷಣಿಕ ವಾತಾವರಣ ಕಲ್ಪಿಸುವಲ್ಲಿ ಕಾಳಜಿ ವಹಿಸಲಾಗುತ್ತಿದೆ ಎಂದರು.
ನಿಲಯ ಪಾಲಕ ಅನಿಲ ಕಾಂಬಳೆ ಮಾತನಾಡಿದರು. ಪತ್ರಕರ್ತ ಉದಯಕುಮಾರ ಮುಳೆ, ಚನ್ನಮ್ಮ ವಸತಿ ಶಾಲೆ ನಿಲಯ ಪಾಲಕಿ ಅರ್ಚನಾ ಚಂದುಕರ, ಶಿಕ್ಷಕರಾದ ನಿತಿನ ನೀಲಕಂಠೆ, ಅನೀಲಕುಮಾರ ಪರೆಪ್ಪ ಮತ್ತು ಪಾಲಕರು ಇದ್ದರು. ಸಾದಕ್ ಅಲಿ ಸ್ವಾಗತಿಸಿದರು. ಸಿದ್ದಲಿಂಗ ಪೂಜಾರಿ ವಂದಿಸಿದರು. ಜಗನ್ನಾಥಯ್ಯ ನಿರೂಪಣೆ ಮಾಡಿದರು.