ಅಳವಂಡಿ: ಮಕ್ಕಳು ತಮ್ಮ ಹಕ್ಕುಗಳು ಹಾಗೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ರಮೇಶರಡ್ಡಿ ಮೂಲಿಮನಿ ತಿಳಿಸಿದರು.
ಇದನ್ನೂ ಓದಿ: ಯುವ ಸಮೂಹ ಶಿಕ್ಷಣ, ಸಂಸ್ಕಾರ ಮೈಗೂಡಿಸಿಕೊಳ್ಳಲಿ
ಸಮೀಪದ ಬಿಸರಹಳ್ಳಿಯಲ್ಲಿ ಗ್ರಾಪಂ, ಜಿಪಂ, ತಾಪಂ ಹಾಗೂ ವಿವಿಧ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಸೋಮವಾರ ಮಾತನಾಡಿದರು.
ಶಿಕ್ಷಣವೆಂಬ ಆಸ್ತಿಯನ್ನು ಮಕ್ಕಳಿಗೆ ಕೊಡುಗೆಯಾಗಿ ನೀಡಿ. ಸರ್ಕಾರ ನೀಡಿದ ಶೈಕ್ಷಣಿಕ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಪ್ರಗತಿ ಹೊಂದಬೇಕು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಗ್ರಾಪಂ ಶಾಲೆಗಳಿಗೆ ಅಗತ್ಯ ಇರುವ ಸೌಲಭ್ಯ ಒದಗಿಸಬೇಕು ಎಂದರು.
ಸಿಆರ್‌ಪಿ ಆರ್.ಬಿ. ಬಸವರಾಜ ಮಾತನಾಡಿ, ಮಕ್ಕಳು ದೇಶದ ಆಸ್ತಿಯಾಗಿದ್ದು, ಸದೃಢ ಹಾಗೂ ಆರೋಗ್ಯಕರವಾಗಿರುವುದು ಅವಶ್ಯ. ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿದ್ದು, ಪ್ರತಿ ಮಗು ಶಿಕ್ಷಣದ ಹಕ್ಕು ಪಡೆಯಬೇಕು. ಪಾಲಕರು ಯಾವುದೇ ಕಾರಣಕ್ಕೂ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಸಹಾಯವಾಣಿ ಬಗ್ಗೆ ಜಾಗೃತಿ ಅವಶ್ಯ ಎಂದರು.
ಪಿಡಿಒ ಶೇಖರಪ್ಪ ಮಡಿವಾಳರ ಮಾತನಾಡಿದರು. ನಂತರ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಸುಶೀಲಮ್ಮ ಕೊಪ್ಪಳ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗಪ್ಪ ಬಿಕನಳ್ಳಿ,
ಅಂಗನವಾಡಿ ಮೇಲ್ವಿಚಾರಕಿ ವಿಶಾಲಾಕ್ಷಿ, ಪ್ರಮುಖರಾದ ಮಲ್ಲಯ್ಯ ಮಠ, ಗಂಗಮ್ಮ, ಮಹಮದ್ ಇಬ್ರಾಹಿಂ, ಮಂಜುಳಾ ಮಠ, ನಿಸಾರ್ ಅಹಮದ್, ಮುಖ್ಯ ಶಿಕ್ಷಕರಾದ ಬಾಬುರಡ್ಡಿ, ಗವಿ, ಹನುಮಂತಪ್ಪ, ಬಸಯ್ಯ, ಬಸವರಾಜ, ಹನುಮಂತಪ್ಪ ಇತರರಿದ್ದರು.