ಜಿಲ್ಲೆ

ಮಕ್ಕಳಲ್ಲಿನ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸುವ ಮೂಲಕ ಪ್ರೋತ್ಸಾಹ ನೀಡಬೇಕು

ಮೈಸೂರು: ನನ್ನಲ್ಲಿದ್ದ ಕಲೆಯನ್ನು ಗುರುತಿಸಿದ ನನ್ನ ತಾಯಿಯೇ ನನ್ನ ಬರವಣಿಗೆಯ ಮೊದಲ ಗುರು. ಆದ್ದರಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ಲೇಖಕಿ, ರಾಜ್ಯಸಭಾ ಸದಸ್ಯೆ ಡಾ.ಸುಧಾ ಮೂರ್ತಿ ಹೇಳಿದರು.

ಮೈಸೂರು ಲಿಟರರಿ ಾರ್ಮ್ ಚಾರಿಟಬಲ್ ಟ್ರಸ್ಟ್, ಮೈಸೂರು ಬುಕ್ ಕ್ಲಬ್ಸ್ ಮತ್ತು ಮೈಸೂರು ಚಿಲ್ಡ್ರನ್ಸ್ ಬುಕ್ ಕ್ಲಬ್ಸ್ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಅವರ ‘ಗ್ರ್ಯಾಂಡ್‌ಪಾ ಬ್ಯಾಗ್ ಆ್ ಸ್ಟೋರಿಸ್’ ಪುಸ್ತಕ ಬಿಡುಗಡೆ ಹಾಗೂ ‘ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಓದಿದವರಷ್ಟೇ ಪುಸ್ತಕ ಬರೆಯುತ್ತಾರೆಂದು ತಿಳಿದಿದೆ. ಹಾಗಾಗಿ ಬರವಣಿಗೆ ಬಗ್ಗೆ ಆಸಕ್ತಿ ಇದ್ದರೂ ಪುಸ್ತಕ ಬರೆಯಲು ಹೆದರುತ್ತಿದ್ದೆ. ಆದರೆ, ನನ್ನ ತಾಯಿ ನನ್ನ ಅಭಿಪ್ರಾಯವನ್ನು ಬದಲಾಯಿಸಿದರು. ನಿನ್ನ ಅನುಭವಗಳಿಗೆ ಅಕ್ಷರ ರೂಪ ಕೊಡು ಎಂದು ಉತ್ತೇಜನ ನೀಡಿದರು. ಪರಿಣಾಮ ನಾನು ಪುಸ್ತಕ ಬರೆಯಲು ಶುರು ಮಾಡಿದೆ. ಸಾಹಿತ್ಯ ಅರಳಲು ಯಾವುದೇ ರೀತಿಯ ಬಂಧನಗಳಿಲ್ಲ ಎಂಬುದನ್ನು ಅರಿತುಕೊಂಡೆ. ಆದ್ದರಿಂದ ಎಲ್ಲ ಪೋಷಕರು ಕೂಡ ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಬೇಕು ಎಂದರು.

ನನ್ನ ತಂದೆ ನನಗೆ ಪ್ರವಾಸ ಕಥನವನ್ನು ಬರೆಯಲು ಪ್ರೇರೇಪಿಸಿದರು. 1979ರಲ್ಲಿ ನನ್ನ ಮೊದಲ ಪ್ರವಾಸ ಕಥನ ಪ್ರಕಟವಾದಾಗ ತಂದೆ ಸಂಭ್ರಮಿಸಿದ್ದರು. ಇದೇ ಖುಷಿಯಲ್ಲಿ 1981ರಲ್ಲಿ ನಾನು ‘ಅತಿರಿಕ್ತೆ’ ಎಂಬ ಮೊದಲ ಕಾದಂಬರಿ ಬರೆದೆ. ಇದು 10 ಭಾಷೆಗೆ ಅನುವಾದವಾಗಿದೆ ಎಂದರು.

ನನ್ನ ಸುತ್ತಮುತ್ತ ನಡೆಯುವ ಸಂಗತಿಗಳೇ ನನಗೆ ಬರವಣಿಗೆಯ ವಸ್ತು ಆಗಿರುತ್ತದೆ. ಇದೇ ಕಾರಣಕ್ಕೆ ‘ಡಾಲರ್ ಸೊಸೆ’ ಪುಸ್ತಕ 28 ಮುದ್ರಣ ಕಂಡಿತು. ಕೊನೆಗೆ ಧಾರವಾಹಿ ಕೂಡ ಆಯಿತು. ಕನ್ನಡ ನನ್ನ ಭಾಷೆ. ಅದರೊಂದಿಗೆ ವ್ಯವಹರಿಸಲು ನನಗೆ ಸುಲಭ. ನಾನು ಸಾಮಾನ್ಯ ವ್ಯಕ್ತಿ ಎಲ್ಲಿ ಹೋದರು ಕನ್ನಡದಲ್ಲಿ ಮಾತನಾಡಲು ಇಷ್ಟಪಡುತ್ತೇನೆ. ಹಾಗಾಗಿ ಪ್ರಾರಂಭದಲ್ಲಿ ಕನ್ನಡದಲ್ಲೇ ಪುಸ್ತಕ ಬರೆದೆ. ಆ ನಂತರ ಇಂಗ್ಲಿಷ್‌ನಲ್ಲಿ ಅಂಕಣ, ಪುಸ್ತಕ ಬರೆಯಲು ಪ್ರಾರಂಭಿಸಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಸಂವಾದ ನಡೆಸಿಕೊಟ್ಟರು. ಮೈಸೂರು ಲಿಟರರಿ ಾರ್ಮ್ ಚಾರಿಟಬಲ್ ಟ್ರಸ್ಟ್‌ನ ಶುಭಾ ಸಂಜಯ್ ಅರಸ್ ಸೇರಿದಂತೆ ಇತರರು ಇದ್ದರು.

ಆಕರ್ಷಿಸಿದ ಸುಧಾಮೂರ್ತಿ ಶ್ವಾನ:

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ಸುಧಾಮೂರ್ತಿ ಅವರ ಮುದ್ದು ಶ್ವಾನ ಗೋಪಿ ಕಾರ್ಯಕ್ರಮ ಕೇಂದ್ರ ಬಿಂದು ಆಗಿದ್ದ. ಗೋಪಿ ಸುಧಾಮೂರ್ತಿ ಅವರ ಜೊತೆ ವೇದಿಕೆ ಹಂಚಿಕೊಂಡ. ವೇದಿಕೆಯಿಂದ ಗೋಪಿ ಇಳಿದ ಮೇಲೆ ಮಕ್ಕಳು ಅವನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.