ವಿಜಯವಾಣಿ ಸುದ್ದಿಜಾಲ ಆನೇಕಲ್
ಪಟ್ಟಣದ ತೆಲಗರಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಅವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡ ಪಾಲಕರು ವಸತಿ ಶಾಲೆ ಆವರಣದಲ್ಲಿ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದರು.
6,7 ಹಾಗೂ 8ನೇ ತರಗತಿಯಲ್ಲಿ ಶಿಕ್ಷಕರು ಇಲ್ಲದೆ ಮಕ್ಕಳಿಗೆ ಪಾಠ ಹೇಳುವವರೇ ಇಲ್ಲವಾಗಿದೆ. ಸಮಾಜಶಾಸ್ತ್ರ ಇಂಗ್ಲಿಷ್, ಹಿಂದಿ ವಿಷಯಕ್ಕೆ ಕಾಯಂ ಶಿಕ್ಷಕರಿಲ್ಲದೆ ತೊಂದರೆ ಎದುರಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
2015ರಿಂದ ಕಾಯಂ ಮುಖ್ಯಶಿಕ್ಷಕರ ಆಯ್ಕೆ ಇದುವರೆಗೂ ಆಗಿಲ್ಲ, ಕಾರ್ಯಂ ವಾರ್ಡನ್ ಕೂಡ ಇಲ್ಲದೆ ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿ ಪಡೆಯಲು ಸಾಧ್ಯ ಆಗುತ್ತಿಲ್ಲ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದರು. ಹಿಂದಿ, ಇಂಗ್ಲಿಷ್, ಸಮಾಜಶಾಸ್ತ್ರ, ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಬೇರೆ ಕಡೆಯಿಂದ ಬಂದು ವಾರಕ್ಕೆ ಎರಡು ಅಥವಾ ಮೂರು ದಿನ ಮಾತ್ರ ಪಾಠ ಹೇಳಿಕೊಡುತ್ತಿದ್ದಾರೆ. 330 ವಿದ್ಯಾರ್ಥಿಗಳಿರುವ ವಸತಿ ಶಾಲೆಯಲ್ಲಿ 7 ಜನ ಶಿಕ್ಷಕರು ಇದ್ದಾರೆ. ಆದರೆ ಶಾಲೆಗೆ ಬಹುತೇಕ ವಿಷಯಗಳಿಗೆ ಕಾಯಂ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಮನವಿ ಪತ್ರ ಸಲ್ಲಿಕೆ: ಶಾಲೆ ಆವರಣದಲ್ಲಿ ಜಮಾಯಿಸಿದ ಪಾಲಕರು ಮಧ್ಯಾಹ್ನದವರೆಗೂ ಕಾದು ಕುಳಿತಿದ್ದರು. ಈ ವೇಳೆ ಆಗಮಿಸಿದ ಪ್ರಭಾರ ಮುಖ್ಯ ಶಿಕ್ಷಕರನ್ನು ಭೇಟಿಯಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಪಾಠ ಮಾಡುತ್ತಿಲ್ಲ. ಕೂಡಲೇ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ನಾಲ್ಕು ತಿಂಗಳಿಂದ ಮಕ್ಕಳು ಪದೇಪದೆ ಕರೆ ಮಾಡಿ ನಮಗೆ ಪಾಠ ಪ್ರವಚನ ದೊರಕುತ್ತಿಲ್ಲ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಕೇಳಿದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಾಗಿ ದೂರದ ಊರಿನಿಂದ ಇಲ್ಲಿಗೆ ಬಂದು ಮಕ್ಕಳಿಗಾಗಿ ಕಾಯ್ದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಪಾಲಕರು ಕಿಡಿಕಾರಿದರು.
ದಬ್ಬಾಳಿಕೆ ಮಾಡುತ್ತಾರೆ: ಶಾಲೆಯಲ್ಲಿ ಸರಿಯಾದ ಪಾಠ ಸಿಗುತ್ತಿಲ್ಲ. ಭಾನುವಾರ ವಸತಿ ಶಾಲೆಯಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿದವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತದೆ ಇದರಿಂದಾಗಿ ವಿದ್ಯಾರ್ಥಿಗಳು ಯಾರೂ ಮುಂದೆ ಬಂದು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ವಿದ್ಯಾರ್ಥಿಗಳು ಕಣ್ಣೀರು ಹಾಕಿದರು.