ವಿಜಯವಾಣಿ ಸುದ್ದಿಜಾಲ ಉಡುಪಿ
ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಅಂಟಿಕೊಂಡು ಅಂಕ ಗಳಿಕೆಯೇ ನಮ್ಮ ಜೀವನದ ಉತ್ತುಂಗ ಗುರಿ ಎಂಬಂತೆ ಬದುಕಿದರೆ ಸಾಲದು. ಪಠ್ಯಪೂರಕವಾದ ನಾಟಕ, ಯಕ್ಷಗಾನ, ನೃತ್ಯ, ಬರಹ ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪಾಲಕರು ಜವಾಬ್ದಾರಿ ನಿಭಾಯಿಸಬೇಕು ಎಂದು ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಅಧ್ಯಕ್ಷ, ಶಿಕ್ಷಣ ತಜ್ಞ ಡಾ. ಗಣನಾಥ ಶೆಟ್ಟಿ ಎಕ್ಕಾರು ಕರೆ ನೀಡಿದರು.
ಉಡುಪಿಯ ಉದ್ಯಾವರದಲ್ಲಿರುವ ಹಿಂದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಮಾತನಾಡಿ, ಮಕ್ಕಳು ಕೌಶಲ ಬೆಳೆಸಿಕೊಳ್ಳುವಂತಾಗಬೇಕು. ಅದರಿಂದ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರವಿಕಿರಣ ಪಾಠಕ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಯು. ಸುರೇಶ ಶೆಣೈ, ಶಾಲಾಡಳಿತ ಸಮಿತಿಯ ಸದಸ್ಯರಾದ ಉದ್ಯಾವರ ನಾಗೇಶಕುಮಾರ್, ಕೃಷ್ಣ ರಾವ್, ಗಣೇಶಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಉಮೇಶ ಕರ್ಕೇರ ಉಪಸ್ಥಿತರಿದ್ದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ, ಮುಖ್ಯೋಪಾಧ್ಯಾಯಿನಿ ಅನುರಾಧಾ ಪಿ. ಶೆಟ್ಟಿ ವರದಿ ವಾಚಿಸಿದರು. ಸಹ ಶಿಕ್ಷಕಿ ಅಕ್ಷತಾ ಸ್ವಾಗತಿಸಿದರು. ಸಹ ಶಿಕ್ಷಕಿ ವನಿತಾ ಪಿ. ವಂದಿಸಿದರು. ಸಹ ಶಿಕ್ಷಕ ಯು.ವಿಕ್ರಂ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ದಿನದ 24 ಗಂಟೆಗಳಲ್ಲಿ 7 ಗಂಟೆ ಮಾತ್ರ ಮಕ್ಕಳು ಶಾಲೆಯಲ್ಲಿ ಕಳೆಯುತ್ತಾರೆ. ಉಳಿದ 17 ಗಂಟೆ ಹೆತ್ತವರೊಂದಿಗೆ ಇರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳ ಜವಾಬ್ದಾರಿ ಶಿಕ್ಷಕರಿಗಷ್ಟೇ ಅಲ್ಲ, ಪಾಲಕರಿಗೂ ಇದೆ. ಶಿಕ್ಷಣ ವ್ಯಾಪಾರೀಕರಣ ಆಗುತ್ತಿರುವ ಈ ಸಂದರ್ಭದಲ್ಲಿ ಸೇವೆಯೆಂದು ಪರಿಗಣಿಸಿ ಶುಲ್ಕ ರಹಿತವಾಗಿ ಆಧುನಿಕ ಶಿಕ್ಷಣ ನೀಡುತ್ತಿರುವ ಈ ಶಾಲೆಯ ಕಾರ್ಯ ಶ್ಲಾಘನೀಯ. | ಡಾ. ಗಣನಾಥ ಶೆಟ್ಟಿ ಎಕ್ಕಾರು. ಶಿಕ್ಷಣ ತಜ್ಞ