ಜಿಲ್ಲೆ

ಬಾಂಧವ್ಯಕ್ಕೆ ಧಕ್ಕೆ ತರುವ ಮಾತು ಸಲ್ಲ

ಪರಶುರಾಮಪುರ: ಹಿರಿಯೂರು ಭಾಗದ ಜನತೆಗೆ ಯಾವುದೇ ಅನ್ಯಾಯ ಮಾಡಿಲ್ಲ. ವಿವಿ ಸಾಗರದ 0.25 ಟಿಎಂಸಿ ಅಡಿ ನೀರನ್ನು ಕಾನೂನು ಪ್ರಕಾರವೇ ಪಡೆಯಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಸಮೀಪದ ಶೀಡ್ಲಯ್ಯನಕೋಟೆಯ ಬಳಿಯ ಬೃಹತ್ ಚೆಕ್‌ಡ್ಯಾಂ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ವೇದಾವತಿ ನದಿಯೂ ಸೇರಿ ತಾಲೂಕಿನ 50 ಕೆರೆ ಮತ್ತು ಮೊಳಕಾಲ್ಮೂರಿನ 20 ಕೆರೆಗಳಿಗೆ ನೀರು ತುಂಬಿಸುವ ವಿಷಯ ಪರಿಷ್ಕೃತ ವರದಿಯಲ್ಲಿ ಇದೆ ಎಂದು ಹೇಳಿದರು.

ವಿವಿ ಸಾಗರದ ನೀರನ್ನು ಬಳಕೆ ಮಾಡಿಕೊಳ್ಳುವ ಮೂಲಕ ಎರಡೂ ಕ್ಷೇತ್ರದ ಜನರು ಅನ್ಯೋನ್ಯವಾಗಿ ಇರಬೇಕು. ನೀರಿನ ಬಗೆಗಿನ ಅಸಭ್ಯವರ್ತನೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರೂ ಹರಿಯಬಿಡಬಾರದು ಎಂದು ಮನವಿ ಮಾಡಿದರು.

ತಾಪಂ ಮಾಜಿ ಅಧ್ಯಕ್ಷ ವೀರೇಶ್, ಯಲ್ಲಪ್ಪ, ನಗರಸಭೆ ಸದಸ್ಯರಾದ ವೈ.ಪ್ರಕಾಶ್, ರಮೇಶಗೌಡ, ಆರ್.ರಾಘವೇಂದ್ರ, ಸದಸ್ಯೆ ಮಂಜುಳಾ, ಮಾಜಿ ಸದಸ್ಯ ಸೈಯದ್, ಪಕ್ಷದ ಮುಖಂಡ ಹನುಮಂತಪ್ಪ, ದುರ್ಗಾವರದ ರಂಗಸ್ವಾಮಿ, ಸಿದ್ದಾಪುರ ಶೇಖರ್, ರೈತ ಮುಖಂಡ ಆರ್.ಎ. ದಯಾನಂದಮೂರ್ತಿ, ಮುಚ್ಚಕುಂಟೆ ಪಾಲಯ್ಯ, ಖಾದರ್, ರಂಗಸ್ವಾಮಿ ಕೃಷ್ಣಾ ಮಹೇಶ ಇದ್ದರು.