ಪರಶುರಾಮಪುರ: ಶಿಕ್ಷಣದ ಕಾರಣದಿಂದ ಹಿಂದುಳಿದ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಬೆಳಗೆರೆ ಗ್ರಾಪಂ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ, ತಾಪಂ, ಪೊಲೀಸ್, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಚಾರಗೋಷ್ಠಿ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟರ ಮೇಲಿನ ದೌರ್ಜನ್ಯ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದಕ್ಕೆ ಶಿಕ್ಷಣವೇ ಪ್ರಮುಖ ಕಾರಣ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳ ಕೆಲ ಕಡೆಗಳಲ್ಲಿ ಅಸ್ಪಶ್ಯತೆ ಆಚರಣೆ ಆಗಾಗ ಕಂಡುಬರುತ್ತಿವೆ. ಶಿಕ್ಷಣ, ಜಾಗೃತಿ ಮೂಲಕ ಸಂಪೂರ್ಣವಾಗಿ ಬದಲಾಯಿಸಬೇಕು ಎಂದರು.
ಜಿಪಂ ಸದಸ್ಯ ಬಿ.ಪಿ.ಪ್ರಕಾಶ ಮೂರ್ತಿ ಮಾತನಾಡಿ, ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದು, ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದರು.
ಜಾತಿ ಪದ್ಧತಿ ನಿರ್ಮೂಲನೆಗೆ ಸರ್ಕಾರ 1955 ರಲ್ಲಿ ನಾಗರಿಕ ಹಕ್ಕು ಅಧಿನಿಯಮ ಜಾರಿಗೆ ತರಲು ಪ್ರಯತ್ನಿಸಿತು. ನಂತರ 1989ರಲ್ಲಿ ಪರಿಶಿಷ್ಟ ಜಾತಿ, ವರ್ಗಗಳ ದೌರ್ಜನ್ಯ ಪ್ರತಿಬಂಧಕ ಅಧಿನಿಯಮ ಜಾರಿಗೆ ತಂದಿತು ಎಂದರು.
ತಾಪಂ ಸದಸ್ಯ ಸಮರ್ಥರಾಯ್, ನಗರಸಭೆ ಮಾಜಿ ಉಪಾಧ್ಯಕ್ಷ ವಿಜಯಕುಮಾರ್, ವಕೀಲರಾದ ಜಡೆಕುಂಟೆ ಕುಮಾರ್ ಬೋರಣ್ಣ, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ್, ಪಿಡಿಒ ಗುಂಡಪ್ಪ ಮಾತನಾಡಿದರು.
ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯರಾದ ಜೆ.ವೀರೇಶ, ಸುವರ್ಣಮ್ಮ, ನಗರಸಭೆ ಸದಸ್ಯ ರಮೇಶಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆಂಜನೇಯ, ಗ್ರಾಪಂ ಅಧ್ಯಕ್ಷೆ ತಿಪ್ಪಕ್ಕ, ಉಪಾಧ್ಯಕ್ಷೆ ಮಹಾದೇವಮ್ಮ, ಪಿಎಸ್‌ಐ ಎಸ್.ಡಿ.ನೂರ್ ಅಹಮದ್, ಸಮಾಜ ಕಲ್ಯಾಣ ಅಧಿಕಾರಿ ಮಂಜಪ್ಪ ಇತರರಿದ್ದರು.
ಅಸಮಾಧಾನ: ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟಿರಲಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಸದಸ್ಯರು ಬೇಸರ ವ್ಯಕ್ತಪಡಿಸಿದರು. ಮದ್ಯಪಾನ ಮುಕ್ತ ಗ್ರಾಮವನ್ನಾಗಿ ಮಾಡಿ ಎಂದು ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದರು.