ಜಿಲ್ಲೆ

ವಿಷಯಗಳ ಮನನಕ್ಕೆ ರಸಪ್ರಶ್ನೆ ಸಾಥ್

Chitradurga

ಪರಶುರಾಮಪುರ: ಪ್ರೌಢ ಹಂತದ ವಿದ್ಯಾರ್ಥಿಗಳ ಕಲಿಕೆ ಪರಿಣಾಮಕಾರಿಯಾಗಲು ರಸಪ್ರಶ್ನೆ ಕಾರ್ಯಕ್ರಮ ಸಹಕಾರಿ ಎಂದು ಪ್ರಭಾರ ಮುಖ್ಯಶಿಕ್ಷಕ ಎಸ್.ಶಿವಣ್ಣ ತಿಳಿಸಿದರು.

ಸಿದ್ದೇಶ್ವರನದುರ್ಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ದುರ್ಗ-ಪಿ.ಮಹದೇವಪುರ ಪ್ರೌಢಶಾಲೆಗಳು, ಶಿಕ್ಷಣ ಇಲಾಖೆ ಹಾಗೂ ಭಾಷಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಭಾಷಾ ವಿಷಯಗಳ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

10ನೇ ತರಗತಿ ವಿದ್ಯಾರ್ಥಿಗಳಲ್ಲಿ ವಿಷಯ ಪ್ರಭುತ್ವ, ಪರೀಕ್ಷೆ ಎದುರಿಸುವ ಸಾಮರ್ಥ್ಯ ವೃದ್ಧಿಗೆ ರಸಪ್ರಶ್ನೆ ಕಾರ್ಯಕ್ರಮ ಬಹು ಉಪಯುಕ್ತ ಎಂದರು.

ಪಿ.ಮಹದೇವಪುರದ ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕ ಎ.ವೀರಣ್ಣ ಮಾತನಾಡಿ, ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ರಸಪ್ರಶ್ನೆ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.

ಶಿಕ್ಷಕರಾದ ಕಾಟಪ್ಪ, ಕೆಂಚವೀರಮ್ಮ, ಯಾಸ್ಮಿನ್ ಕೌಸರ್, ಶಶಿಕಲಾ, ಚಿಕ್ಕಣ್ಣ, ಎನ್.ನರಸಿಂಹಪ್ಪ, ತಾರಾಕುಮಾರಿ, ವೆಂಕಟಲಕ್ಷ್ಮಮ್ಮ, ರವೀಂದ್ರ ರೆಡ್ಡಿ, ಮಧು ಹಾಗೂ ಎರಡೂ ಶಾಲೆಯ ವಿದ್ಯಾರ್ಥಿಗಳು ಇದ್ದರು.