ಜಿಲ್ಲೆ

ಅನುಕಂಪ ಬೇಕಿಲ್ಲ ಅವಕಾಶ ಬೇಕು

Chitradurga

ಪರಶುರಾಮಪುರ: ಅಂಗವಿಕಲರಿಗೆ ಕೇವಲ ಅನುಕಂಪ ತೋರಿಸಿದರೆ ಸಾಲದು, ಅವರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಸಮೀಪದ ಚನ್ನಮ್ಮನಾಗತಿಹಳ್ಳಿ ಗ್ರಾಪಂ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂಗವಿಕಲರಿಗೆ ಆಹಾರದ ಕಿಟ್‌ಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್‌ಡೌನ್, ಕರೊನಾ ವೈರಸ್ ಹಿನ್ನೆಲೆಯಲ್ಲಿ ಸಾಕಷ್ಟು ಪ್ಯಾಕೇಜ್‌ಗಳನ್ನು ಘೋಷಿಸಿದ್ದು, ಇವುಗಳ ರೂಪುರೇಷೆ ಸಿದ್ದವಾಗಬೇಕಿದೆ. ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ಕುಲಕಸುಬುಗಳ ಜನರು ಹಾಗೂ ವಿವಿಧ ಸ್ವ-ಉದ್ಯೋಗಿಗಳಿಗೆ ನೆರವಾಗಲಿದೆ ಎಂದರು.

ಸಮಾಜದಲ್ಲಿ ಅಂಗವಿಕಲರನ್ನು ಜನರು ನೋಡುವ ದೃಷ್ಟಿಕೋನ ಬದಲಾಗಬೇಕು. ಪರಿಸರದ ಪ್ರಭಾವ, ಅನುವಂಶೀಯತೆ ಸೇರಿ ವಿವಿಧ ಕಾರಣದಿಂದ ಅಂಗವಿಕಲ ಮಕ್ಕಳು ಜನಿಸುತ್ತಾರೆ ಎಂದು ತಿಳಿಸಿದರು.

ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಮಾತನಾಡಿ, ಚಳ್ಳಕೆರೆ ತಾಲೂಕಿನ 4 ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ಶಾಸಕರು ತಮ್ಮ ವೈಯಕ್ತಿಕ ಖರ್ಚಿನಿಂದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿದ್ದಾರೆ ಎಂದರು.

ತಾಪಂ ಜೆಡಿಎಸ್ ಸದಸ್ಯ ಸಮರ್ಥರಾಯ ಮಾತನಾಡಿ, ಜನಪ್ರತಿನಿಧಿಗಳಾದವರು ತಮ್ಮ ಕ್ಷೇತ್ರದ ಜನರ ಸಮಸ್ಯೆ ಅರಿತು ಕೆಲಸ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಶಾಸಕರ ಕಾರ್ಯ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.