ಪರಶುರಾಮಪುರ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣ ಬೆಳೆಸಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಹಕಾರಿಯಾಗಿದೆ ಎಂದು ಎಸ್.ದುರ್ಗ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಆರ್.ಮಂಜುಳಾ ತಿಳಿಸಿದರು.
ಸ.ಪ್ರೌ.ಶಾಲೆಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಸಮಿತಿ ಸಹಯೋಗದಲ್ಲಿ ಸಿದ್ದೇಶ್ವರನದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಬೆಟ್ಟದ ಕ್ಷೇತ್ರ ಅಧ್ಯಯನ, ಚಾರಣ ಶಿಬಿರದಲ್ಲಿ ಧ್ವಜ ವಂದನೆ ಸಲ್ಲಿಸಿ ಮಾತನಾಡಿದರು.
ಚಾರಣ ಶಿಬಿರದ ನೇತೃತ್ವ ಸ್ಕೌಟ್ಸ್ ಮಾಸ್ಟರ್ ಎಸ್.ಶಿವಣ್ಣ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಸ್ಥಳೀಯ ಮಾರಮ್ಮ ಮತ್ತು ಸಿದ್ದೇಶ್ವರನ ದೇವಸ್ಥಾನಗಳು, ಎಸ್.ದುರ್ಗ ಬೆಟ್ಟದ ಬಗ್ಗೆ ರಸಪ್ರಶ್ನೆ, ಅಡುಗೆ ತಯಾರಿ ತರಬೇತಿ, ಆಟಗಳು, ಪಕ್ಷಿಗಳ ಧ್ವನಿ ಅನುಕರಣೆ, ವನ್ಯಜೀವಿ, ವಿವಿಧ ಜಾತಿಯ ಗಿಡಮರಗಳ ಪರಿಚಯ, ನಾಯಕತ್ವ ತರಬೇತಿ ಶಿಬಿರ ನೀಡಲಾಯಿತು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯಲ್ಲಿ ನೋಂದಣಿಗೊಂಡು ವಿವಿಧ ಹಂತದ ತರಬೇತಿ ಪಡೆದ ವಿದ್ಯಾರ್ಥಿ ನಾಯಕರಾದ ತರುಣ್, ಅನಿಲ್, ಶಾರುಖ್, ಪ್ರವೀಣ, ನರಸಿಂಹಸ್ವಾಮಿ, ಸಿಂಧು, ಕುಸುಮಾ, ಭರತ್, ಈರಣ್ಣ, ಚಾರಣ ಹಾಗೂ ಶಿಬಿರದ ವಿವಿಧ ಗುಂಪುಗಳ ನಾಯಕರಾಗಿ ಕರ್ತವ್ಯ ನಿರ್ವಹಿಸಿದರು.
ಶಿಕ್ಷಕರಾದ ಕಾಟಪ್ಪ, ಎನ್.ನರಸಿಂಹಪ್ಪ, ತಾರಾಕುಮಾರಿ, ಪರಿಮಳಾ, ವೆಂಕಟಲಕ್ಷ್ಮಮ್ಮ, ಚಿಕ್ಕಣ್ಣ, ರವೀಂದ್ರ ರೆಡ್ಡಿ ಭಾಗವಹಿಸಿದ್ದರು.