ಪರಶುರಾಮಪುರ: ಧರ್ಮ ಉಳಿದರೆ ನಾಡು ಉಳಿದೀತು ಎಂಬ ಅರಿವು ಯುವ ಪೀಳಿಗೆಯಲ್ಲಿ ಇರಬೇಕು ಎಂದು ಬಜರಂಗದಳದ ಶಿವಮೊಗ್ಗ ವಿಭಾಗದ ಸಂಯೋಜಕ ಪ್ರಭಂಜನ್ ತಿಳಿಸಿದರು.
ಗ್ರಾಮದಲ್ಲಿ ಶುಕ್ರವಾರ ವಿಶ್ವ ಹಿಂದು ಪರಿಷತ್, ಬಜರಂಗದಳದ ಹೋಬಳಿ ಘಟಕ ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿನ ಹಿಂದು ರಾಷ್ಟ್ರಗಳಲ್ಲಿ ಭಾರತ ಅಗ್ರಗಣ್ಯವಾದುದು. ನಮ್ಮ ಧರ್ಮದ ಉಳಿವು-ಬೆಳವಣಿಗೆಗೆ ಯುವಕರು ಪಣ ತೊಡಬೇಕು ಎಂದು ತಿಳಿಸಿದರು.
ರಾಜ್ಯದ ಗಡಿಪ್ರದೇಶಗಳಲ್ಲಿ ಹಿಂದುಗಳನ್ನು ಪರಿವರ್ತಿಸುವ ದುಷ್ಟ ಶಕ್ತಿಗಳು ಇಂದು ತಲೆ ಎತ್ತುತ್ತಿವೆ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿ ಪರಿವರ್ತನೆಯಾಗಬಾರದು ಎಂದರು.
ತಾಲೂಕು ಸಂಯೋಜಕ ಉಮೇಶ ಮಾತನಾಡಿ, ಪರಶುರಾಮಪುರ ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಇಲ್ಲಿ ಹಿಂದುಗಳು ಸಂಘಟಿತರಾಗಬೇಕು ಎಂದು ತಿಳಿಸಿದರು.
ಹೋಬಳಿ ಘಟಕದ ಅಧ್ಯಕ್ಷ ತಳವಾರ ಮರಿಸ್ವಾಮಿ, ತಾಲೂಕು ಅಧ್ಯಕ್ಷ ಡಾ.ಮಂಜುನಾಥ ಮಾತನಾಡಿದರು. ತಾಲೂಕು ಕಾರ್ಯದರ್ಶಿ ವೆಂಕಟೇಶರೆಡ್ಡಿ, ಭಜರಂಗದಳದ ತಾ.ಸಂಯೋಜಕ ಉಮೇಶ, ಪ್ರಾಣೇಶ, ಮಸ್ಕಲ್ ಶ್ರೀನಿವಾಸ, ಗ್ರಾಪಂ ಸದಸ್ಯ ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು. ಯುವಕರು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಸಿ ಸಂಭ್ರಮಿಸಿದರು.