ಪರಶುರಾಮಪುರ: ಮಹಿಳೆಯರು ಮತ್ತು ಶಿಕ್ಷಣದ ಬಗೆಗೆ ಸಾವಿತ್ರಿಬಾಯಿ ಫುಲೆ ತೋರಿದ ಕಾಳಜಿ ಅಪಾರವಾದುದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಶಿಕ್ಷಣ ಇಲಾಖೆ, ಚಳ್ಳಕೆರೆ ತಾಲೂಕು ಪ್ರಗತಿಪರ ಶಿಕ್ಷಕರ ವೇದಿಕೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಚೌಳೂರು ಗೇಟ್‌ನ ಅಲ್ಲಿಂಪೀರ್ ಸ್ವಾಮಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಅಕ್ಷರದ ತಾಯಿ ಸಾವಿತ್ರಿಬಾಯಿ ಫುಲೆ ಜಯಂತಿ, ಶೈಕ್ಷಣಿಕ ಜಾಗೃತಿ ಹಾಗೂ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ಸನ್ಮಾರ್ಗದತ್ತ ಸಾಗುತ್ತದೆ. ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂಬುದನ್ನು ಕಾರ್ಯರೂಪಕ್ಕೆ ತಂದ ಅಕ್ಷರದ ಅವ್ವ ಫುಲೆ ಬದುಕು ಮಾದರಿ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಆರ್.ಮಾರುತೇಶ ಮಾತನಾಡಿ, ಹಲವು ಸಂಕಷ್ಟಗಳನ್ನು ಅನುಭವಿಸಿದ ಫುಲೆ, ತಮ್ಮ ಸ್ವಾರ್ಥ ಬದುಕನ್ನು ಬದಿಗಿಟ್ಟು ಶಿಕ್ಷಕಿಯಾಗುವ ಮೂಲಕ ಸಮಾಜದ ಹಿತಕ್ಕಾಗಿ ದುಡಿದರು ಎಂದು ಸ್ಮರಿಸಿದರು.
ಬಿಇಒ ಸಿ.ಎಸ್.ವೆಂಕಟೇಶಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಡಿ.ಟಿ.ಹನುಮಂತರಾಯ, ತಾಪಂ ಮಾಜಿ ಅಧ್ಯಕ್ಷ ವೀರೇಶ ಮಾತನಾಡಿದರು.
ಪಿ.ಮಹದೇವಪುರದ ಸರ್ಕಾರಿ ಶಾಲಾ ಮಕ್ಕಳು ಫುಲೆ ಜೀವನ ವೃತ್ತಾಂತ ಸಾರುವ ನಾಟಕ ಅಭಿನಯಿಸಿದರು. ಶಿಕ್ಷಕರ ಸಂಘದ ಪದಾಧಿಕಾರಿಗಳು, ಶೈಕ್ಷಣಿಕ ಚಟುವಟಿಕೆಗಳು, ಕುಂದು ಕೊರತೆ ಕುರಿತು ಶಿಕ್ಷಕರೊಂದಿಗೆ ಸಮಾಲೋಚಿಸಿದರು.
ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಶಿಕ್ಷಕರ ಸಂಘದ ಉಪಾಧ್ಯಕ್ಷ ಮಧು, ಪದಾಧಿಕಾರಿಗಳಾದ ಪ್ರಭು, ಪಾರ್ವತಮ್ಮ, ಬಿ.ಹನುಮಂತಪ್ಪ, ಸಣ್ಣಸೂರಮ್ಮ, ತಿಪ್ಪೇಸ್ವಾಮಿ, ರಾಜಣ್ಣ, ಬಸವರಾಜು, ಮುಖ್ಯಶಿಕ್ಷಕ ಮೂಡಲಗಿರಿಯಪ್ಪ, ಚಂದ್ರಣ್ಣ ಇತರರಿದ್ದರು.