ಪರಶುರಾಮಪುರ: ಪರಶುರಾಮಪುರ ಮುಖ್ಯವೃತ್ತದ ತರಕಾರಿ ಮಾರುಕಟ್ಟೆ ಮಧ್ಯದ ಓವರ್‌ಹೆಡ್ ಟ್ಯಾಂಕ್ ಶಿಥಿಲವಾಗಿದ್ದು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ.
1984 ರಲ್ಲಿ ನಿರ್ಮಾಣವಾದ 80 ಸಾವಿರ ಲೀಟರ್ ಸಾಮರ್ಥ್ಯದ ಈ ಟ್ಯಾಂಕ್ ಆಗಲೋ- ಈಗಲೋ ಬೀಳುವಂತಿದ್ದರೂ ಸ್ಥಳೀಯ ಆಡಳಿತ ದುರಸ್ತಿಯ ಗೋಜಿಗೆ ಹೋಗಿಲ್ಲ. ಈಗಲೂ ಇದರಿಂದಲೇ ನೀರು ಪೂರೈಸಲಾಗುತ್ತಿದೆ.
ಈ ಮೊದಲು ಟ್ಯಾಂಕ್ ಬಳಿ ಯಾವುದೇ ಅಂಗಡಿಗಳಿರಲಿಲ್ಲ. ಈಚೆಗೆ ತರಕಾರಿ ಮತ್ತು ಮಾಂಸದ ಮಳಿಗೆಗಳು ನಿರ್ಮಾಣವಾಗಿವೆ. ಕೆಲ ದಿನಗಳ ಹಿಂದಷ್ಟೇ ಇಲ್ಲಿ ಕುಡಿವ ನೀರಿನ ಶುದ್ಧೀಕರಣ ಘಟಕ ಆರಂಭಿಸಲಾಗಿದೆ. ಬ್ಯಾಂಕ್, ವಸತಿ ಗೃಹಗಳೂ ಸಮೀಪದಲ್ಲಿವೆ.
ಅನಾಹುತ ಸಂಭವಿಸುವ ಮುನ್ನ ಆಡಳಿತಯಂತ್ರಗಳು ಎಚ್ಚೆತ್ತು ಶಿಥಿಲವಾದ ತೊಟ್ಟಿ ಕೆಡವಿ ಹೊಸ ತೊಟ್ಟಿ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಸಂತೆಮೈದಾನಕ್ಕೆ ಸ್ಥಳಾಂತರಿಸಬೇಕು.ಚಿಕನ್-ಮಟನ್ ಅಂಗಡಿಗಳಿಗೆ ಊರ ಹೊರಭಾಗದಲ್ಲಿ ವ್ಯವಸ್ಥೆ ಮಾಡುವಂತೆ ಸ್ಥಳೀಯರಾದ ಪರಶುರಾಮಪುರ ಈರಣ್ಣ, ತಿಮ್ಮಯ್ಯ ನಾಗರಾಜು, ಮಂಜುನಾಥ, ಚಿತ್ತಯ್ಯ, ಕೃಷ್ಣಪ್ಪ ಮನವಿ ಮಾಡಿದ್ದಾರೆ.