ಜಿಲ್ಲೆ

ಲಾಕ್‌ಡೌನ್ ಪಾಲಿಸಿ, ಜೀವ ಉಳಿಸಿಕೊಳ್ಳಿ

Chitradurga

ಪರಶುರಾಮಪುರ: ಜನರ ಹಿತದೃಷ್ಟಿಯಿಂದ ಸರ್ಕಾರ ನೀಡುವ ಸೂಚನೆಗಳನ್ನು ಚಾಚೂ ತಪ್ಪದೇ ಎಲ್ಲರೂ ಪಾಲಿಸದಿದ್ದರೆ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಚಳ್ಳಕೆರೆ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ ಎಚ್ಚರಿಸಿದರು.

ಸಮೀಪದ ಪಾತಪ್ಪನಗುಡಿಯ ಶೆಟ್ಟೂರು-ಚಳ್ಳಕೆರೆ ಮಾರ್ಗದ ಮುಖ್ಯರಸ್ತೆಯಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ಆರಂಭಿಸಿರುವ ಚೆಕ್‌ಪೋಸ್ಟ್‌ಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಕರ್ನಾಟಕ-ಆಂಧ್ರದವರ ಹಿತದೃಷ್ಟಿಯಿಂದ ಸರ್ಕಾರ ಗಡಿಭಾಗದ ಹಳ್ಳಿಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಿದ್ದು, ಜನರು, ವಾಹನ ತಪಾಸಣೆ ಕೈಗೊಂಡು ಆಯಾ ರಾಜ್ಯಗಳಿಗೆ ವಾಪಸ್ ಕಳುಹಿಸಿ ವೈರಸ್ ಹತೋಟಿಗೆ ಕ್ರಮ ಕಾನೂನು ತೆಗೆದುಕೊಂಡಿದೆ ಎಂದರು.

ಕೇಂದ್ರ, ರಾಜ್ಯ ಸರ್ಕಾರಗಳು ಕಠಿಣ ಕಾನೂನು ಜಾರಿಗೆ ತಂದರೂ ಜನರ ಸಹಕಾರ ಸಿಗುತ್ತಿಲ್ಲ. ಹೀಗಾಗಿ ಗಡಿಭಾಗಗಳ ಹಳ್ಳಿಗಳಿಗೆ ಕೇಂದ್ರ ಮಿಲಿಟರಿ ಪಡೆ ನಿಯೋಜಿಸಲಾಗುತ್ತಿದೆ. ಜನರು ಆರೋಗ್ಯ ಕಾಪಾಡಿಕೊಳ್ಳಲು ಸಲಹೆ, ಸೂಚನೆ ಅನುಸರಿಸಬೇಕು ಎಂದು ತಿಳಿಸಿದರು.

ಚಳ್ಳಕೆರೆ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ, ಸಿಪಿಐ ಆನಂದಪ್ಪ, ಪಿಡಿಒ ಗಿರೀಶ, ಪೇದೆಗಳಾದ ಮರುಗೇಂದ್ರಪ್ಪ, ಶಿವಶಂಕರಪ್ಪ, ಗೃಹರಕ್ಷಕ ಕೆ.ಲೋಕೇಶ್, ಆರೋಗ್ಯ ಇಲಾಖೆಯ ದೇವರಾಜು, ಕೃಷ್ಣಕುಮಾರಿ, ಆಶಾ ಕಾರ್ಯಕರ್ತೆ ನಾಗಮ್ಮ, ಪ್ರಹ್ಲಾದ ಇತರರಿದ್ದರು.

ಸಿಪಿಐ ಆನಂದಪ್ಪ ಹೇಳಿಕೆ: ಚೆಕ್‌ಪೋಸ್ಟ್‌ಗಳಿಗೆ ಪೊಲೀಸ್, ಗೃಹರಕ್ಷಕರನ್ನು ನಿಯೋಜಿಸಿದ್ದು, ಆಂಧ್ರ-ಕರ್ನಾಟಕದ ಯಾರೇ ಆಗಲಿ ಸರ್ಕಾರದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆಂಧ್ರ ಕಡೆಯಿಂದ ಬರುವ ವಾಹನಗಳ ತಪಾಸಣೆ ಕೈಗೊಂಡು ವಾಪಸ್ ಕಳುಹಿಸಿ, ಕರ್ನಾಟಕದವರೂ ನೆಪ ಹೇಳಿಕೊಂಡು ಓಡಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.