ಜಿಲ್ಲೆ

ಬೈಕ್‌ನಲ್ಲಿ ಸಂಚರಿಸಿದ ಶಾಸಕರು

Chitradurga

ಪರಶುರಾಮಪುರ: ಜಾಜೂರು-ನಾಗಗೊಂಡನಹಳ್ಳಿ ಸಮೀಪದ ಕೂಡಲಸಂಗಮೇಶ್ವರ ದೇವಸ್ಥಾನದ ಬಳಿ 10 ಕೋಟಿ ರೂ. ಅನುದಾನದಲ್ಲಿ ವೇದಾವತಿ ನದಿಗೆ ಬೃಹತ್ ಬ್ಯಾರೇಜ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಗ್ರಾಮಸ್ಥರು, ರೈತ ಮುಖಂಡರ ಜತೆ ಇತ್ತೀಚೆಗೆ ಬೈಕ್‌ನಲ್ಲಿ ವೇದಾವತಿ ನದಿಪಾತ್ರಗಳ ಹಳ್ಳಿಗಳಲ್ಲಿ ಸಂಚರಿಸಿ ಸ್ಥಳ ಪರಿಶೀಲಿಸಿದ ಬಳಿಕ ಮಾತನಾಡಿದರು.

ಗರಣಿಹಳ್ಳ-ವೇದಾವತಿ ನದಿ ನೀರು ಒಂದೇ ಕಡೆ ಕೂಡುವ ಸ್ಥಳದಲ್ಲಿ ಕೂಡಲಸಂಗಮೇಶ್ವರ ದೇವಸ್ಥಾನವಿದೆ. ಈ ಪ್ರದೇಶದಲ್ಲಿ ಬ್ಯಾರೇಜ್ ನಿರ್ಮಿಸಿದರೆ ಜಾಜೂರು, ನಾಗಗೊಂಡನಹಳ್ಳಿ, ಗುಡಿಹಳ್ಳಿ, ಕಾಲುವೇಹಳ್ಳಿ, ಕ್ಯಾತಗೊಂಡನಹಳ್ಳಿ, ತಪ್ಪಗೊಂಡನಹಳ್ಳಿ, ಮೋದೂರು ಸೇರಿ ಹತ್ತಾರು ಹಳ್ಳಿಗಳ ಗ್ರಾಮಗಳ ಜನ-ಜಾನುವಾರುಗಳಿಗೆ ಉಪಯೋಗವಾಗಲಿದೆ ಎಂದರು.

ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ನಾಗಗೊಂಡನಹಳ್ಳಿಯಲ್ಲಿ ಚಿಲುಮೇರುದ್ರಸ್ವಾಮಿ ಮಠ ಸೇರಿ ವಿವಿಧ ದೇಗುಲಗಳಿದ್ದು, ಇಲ್ಲಿ ಬ್ಯಾರೇಜ್ ನಿರ್ಮಾಣವಾದರೆ ಹೆಚ್ಚು ಅನುಕೂಲ ಎಂದು ತಿಳಿಸಿದರು.

ಜಿಲ್ಲೆ ಬಯಲುಸೀಮೆ ಪ್ರದೇಶವಾಗಿದ್ದು, ಮಳೆಯ ಪ್ರಮಾಣ ತೀರಾ ಕಡಿಮೆ. ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ಪಾವಗಡ ತಾಲೂಕುಗಳ ವಿವಿಧ ಹಳ್ಳಿಗಳಲ್ಲಿ ನೀರಿನ ಸಂಗ್ರಹಕ್ಕೆ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗುತ್ತಿದೆ. ತುಂಗಾ ಹಿನ್ನೀರು ಪೂರೈಕೆ ಯೋಜನೆ ಪ್ರತಿಯಲ್ಲಿದೆ. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಆಂಜನೇಯ, ಶಾಸಕ ಟಿ.ರಘುಮೂರ್ತಿ ಅವರ ಶ್ರಮವಿದ್ದು, ಸ್ಮರಣೆ ಅಗತ್ಯ ಎಂದರು.

ಗ್ರಾಪಂ ಅಧ್ಯಕ್ಷೆ ಭೀಮಕ್ಕ, ಮಾಜಿ ಅಧ್ಯಕ್ಷ ನಾಗರಾಜು, ನಿವೃತ್ತ ಶಿಕ್ಷಕ ಭೀಮಣ್ಣ, ಮೋದೂರು ರಂಗಪ್ಪ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಚನ್ನಕೇಶವ, ಮುಖಂಡರಾದ ಕಲ್ಲೇಶಪ್ಪ, ಮಹೇಶ, ಸಣ್ಣೀರಪ್ಪ, ಜಾಜೂರು ನರಸಿಂಹಪ್ಪ, ಗುಜ್ಜಾರಪ್ಪ ಇದ್ದರು.