ಜಿಲ್ಲೆ

ಶುದ್ಧ ನೀರಿನ ದರ ಹೆಚ್ಚಳಕ್ಕೆ ಆಕ್ರೋಶ

Chitradurga

ಪರಶುರಾಮಪುರ: 20 ಲೀಟರ್ ಶುದ್ಧ ಕುಡಿವ ನೀರಿನ ಬೆಲೆಯನ್ನು ದಿಢೀರ್ ಐದು ರೂ. ಗೆ ಹೆಚ್ಚಿಸಿ ಗ್ರಾಮೀಣರಿಗೆ ಅತಿ ಕಡಿಮೆ ಬೆಲೆಗೆ ಶುದ್ಧ ನೀರು ಪೂರೈಕೆ ಮಾಡಬೇಕೆಂಬ ಸರ್ಕಾರದ ಆಶಯ ಸಂಪೂರ್ಣ ಮಣ್ಣು ಪಾಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಚಳ್ಳಕೆರೆ ತಾಲೂಕಿನಾದ್ಯಂತ ಕಳೆದ ನಾಲ್ಕು ವರ್ಷದಲ್ಲಿ 239-245 ಆರ್‌ಒ ಪ್ಲಾಂಟ್ ತೆರೆಯಲಾಗಿದ್ದು, ಇವುಗಳ ನಿರ್ವಹಣೆಯನ್ನು ಕೆಆರ್‌ಐಡಿಎಲ್ ನೋಡಿಕೊಳ್ಳುತ್ತಿದ್ದಾಗ 20 ಲೀಟರ್ ನೀರಿಗೆ 2 ರೂ. ನಿಗದಿ ಮಾಡಲಾಗಿತ್ತು.

ಇದರಿಂದ ಬಡ ಜನರಿಗೆ ಅನುಕೂಲವೂ ಆಗಿತ್ತು. ಆದರೀಗ ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಜಿಲ್ಲಾಡಳಿತ ಗ್ರಾಮೀಣ ಕುಡಿವ ನೀರು ಮತ್ತು ಸರಬರಾಜು ಇಲಾಖೆಗೆ ಒಪ್ಪಿಸಿದಾಗಿಂದ ನೀರಿನ ದರವನ್ನು 2ರಿಂದ 5 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಗ್ರಾಮೀಣರಿಗೆ ತೀವ್ರ ತೊಂದರೆ ಆಗಿದೆ ಎಂದು ದೂರಿದ್ದಾರೆ.

ಹೋಬಳಿಯ ಪಗಡಲಬಂಡೆ, ಬೋರಪ್ಪನಗುಡಿ, ಪಿ.ಗೌರೀಪುರ, ಪರಶುರಾಮಪುರ, ಪಿಲ್ಲಹಳ್ಳಿ, ಚಿಕ್ಕಚೆಲ್ಲೂರು ಸೇರಿ 20ಕ್ಕೂ ಅಧಿಕ ಘಟಕಗಳು ದುರಸ್ತಿಯಲ್ಲಿದ್ದು, ಇವುಗಳನ್ನು ಕೂಡಲೇ ರಿಪೇರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಚಳ್ಳಕೆರೆ ಗ್ರಾಮೀಣ ಕುಡಿವ ನೀರು ಮತ್ತು ಸರಬರಾಜು ಇಲಾಖೆ ಎಇಇ ಕಾವ್ಯಾ ಹೇಳಿಕೆ: ಆರ್‌ಒ ಪ್ಲಾಂಟ್‌ಗಳ ದುರಸ್ತಿ ಕಾರ್ಯವನ್ನು ಹಂತ ಹಂತವಾಗಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಬೇಸಿಗೆಯಲ್ಲೂ ಜನರಿಗೆ ಸಮಸ್ಯೆ ಆಗದಂತೆ ಜಾಗ್ರತೆ ವಹಿಸಲಾಗುವುದು.

ಪಿಡಿಒ ಜಿ.ನಾಗರಾಜು ಹೇಳಿಕೆ: ಪರಶುರಾಮಪುರ ಗ್ರಾಪಂ ವ್ಯಾಪ್ತಿಯ ಏಳು ಆರ್‌ಒ ಪ್ಲಾಂಟ್‌ಗಳ ನಿರ್ವಹಣೆ ಜವಾಬ್ದಾರಿಯನ್ನು ಸರ್ಕಾರ ಈಗ ಗ್ರಾಮೀಣ ಕುಡಿವ ನೀರು ಮತ್ತು ಸರಬರಾಜು ಇಲಾಖೆಗೆ ಒಪ್ಪಿಸಿದೆ. ಇವರು ಹೆಚ್ಚಿನ ಮಾಡಿರುವ 20 ಲೀಟರ್ ನೀರಿನ ದರವನ್ನು ಪಂಚಾಯಿತಿಯಿಂದ ಕಡಿಮೆ ಮಾಡಿಸಲು ಸಾಧ್ಯವಿಲ್ಲ.