ಪರಶುರಾಮಪುರ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿಷಯಗಳ ಪುನರ್ ಮನನ ಮಾಡಿದರೆ ಪರೀಕ್ಷೆಯನ್ನು ಸುಲಭವಾಗಿ ಬರೆಯಲು ಸಾಧ್ಯ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ ಹೇಳಿದರು.
ಬೆಳಗೆರೆಯ ಶಿಕ್ಷಣ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬೆಳಗೆರೆ-ನಾರಾಯಣಪುರ ಗ್ರಾಮದ ಸೀತಾರಾಮಶಾಸ್ತ್ರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ಪಾಠ ಮಾಡಿದ ಪ್ರಮುಖ ಅಂಶಗಳನ್ನು ನೋಟ್ ಪುಸ್ತಕದಲ್ಲಿ ಬರೆದುಕೊಂಡು ನಿಯಮಿತವಾಗಿ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿ ಶ್ರೀಪಾದ ಪೂಜಾರ್ ಮಾತನಾಡಿ, ಹಳ್ಳಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಕುರಿತು ಆತ್ಮಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಮನೋವೈದ್ಯರಿಂದ ಉಪನ್ಯಾಸ ಕೊಡಿಸಲಾಗುತ್ತಿದೆ ಎಂದರು.
ಬೆಳಗೆರೆ, ನಾರಾಯಣಪುರ, ಕಲಮರಹಳ್ಳಿ, ಟಿ.ಎನ್.ಕೋಟೆ, ಹುಲಿಕುಂಟೆ, ದೇವರಮರಿಕುಂಟೆ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪ್ರಾಂಶುಪಾಲೆ ಸರೋಜಮ್ಮ, ಮುಖ್ಯಶಿಕ್ಷಕ ವೀರಣ್ಣ, ಸಂಪರ್ಕಾಧಿಕಾರಿ ರಾಜಣ್ಣ, ರಾಜಶೇಖರ, ರಾಮಾಂಜನೇಯ, ವೆಂಕಟೇಶ, ಗೆಜ್ಜಪ್ಪ, ದೊಡ್ಡಯ್ಯ ಇದ್ದರು.