ಜಿಲ್ಲೆ

ಹಳ್ಳಿಗರಿಗೆ ಯಾವ ಸಮಸ್ಯೆ ಆಗದಿರಲಿ

Chitradurga

ಪರಶುರಾಮಪುರ: ಏ.14ರ ವರೆಗೆ ಜಾಜೂರು ಗ್ರಾಪಂ ವ್ಯಾಪ್ತಿಯ ಯಾವ ಹಳ್ಳಿಯಲ್ಲೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಜಾಜೂರಿನ ಸಹಿಪ್ರಾ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕೋವಿಡ್-19 ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿದರು.

ಎಲ್ಲ ಹಳ್ಳಿಗಳ ಚರಂಡಿ ಶುಚಿಗೊಳಿಸಬೇಕು. ಊರೊಳಗಿನ ಕಸದ ರಾಶಿ, ತಿಪ್ಪೆ, ಜಂಗಲ್ ತೆರವುಗೊಳಿಸಬೇಕು. ಕುಡಿವ ನೀರು, ಮಹಿಳೆಯರು-ಮಕ್ಕಳಿಗೆ ಸರ್ಕಾರದಿಂದ ದೊರೆವ ಸೌಲಭ್ಯ, ಪಿಂಚಣಿ, ಪಡಿತರ ವಿತರಣೆಯಲ್ಲಿ ಲೋಪ ಆಗದಂತೆ ಕಂದಾಯ, ಆರೋಗ್ಯ, ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ತಾಪಂ ಇಒ ಶ್ರೀಧರ ಬಾರಿಕೇರ ಮಾತನಾಡಿ, ತಾಲೂಕಿನ ಯಾವ ಭಾಗಕ್ಕೂ ಕರೊನಾ ಹರಡದಂತೆ ಎಚ್ಚರ ವಹಿಸಬೇಕು. ಪಿಡಿಒಗಳು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆದು ಸರ್ಕಾರದ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು. ಗ್ರಾಪಂ ವ್ಯಾಪ್ತಿಯ ಆರ್‌ಒ ಪ್ಲಾಂಟ್‌ಗಳನ್ನು ದುರಸ್ತಿಗೊಳಿಸಿ ಶುದ್ಧ ನೀರು ಪೂರೈಕೆ ಮಾಡಬೇಕು ಎಂದು ಆದೇಶಿಸಿದರು.

ಬಹುತೇಕರು ನಳಗಳಿಗೆ ಮೋಟರ್ ಅಳವಡಿಸಿ ನೀರು ಪಡೆಯುತ್ತಿದ್ದರಿಂದ ಎತ್ತರದ ಪ್ರದೇಶಗಳಿಗೆ ನೀರು ಸಿಗದಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷೆ ಭೀಮಕ್ಕ, ಸದಸ್ಯ ರವಿ, ತಾಪಂ ಸದಸ್ಯ ಸಮರ್ಥರಾಯ, ಉಪಾಧ್ಯಕ್ಷೆ ಓಬಕ್ಕ, ಮುಖಂಡರಾದ ಕೆ.ಜೆ.ಸಂತೋಷ, ನರಸಿಂಹಪ್ಪ, ಡಾ.ಶ್ರೀನಿವಾಸ, ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ, ಪಿಡಿಒ ಎನ್.ಆರ್.ತಿಪ್ಪೇಸ್ವಾಮಿ, ಆರ್‌ಐ ಹಿರಿಯಪ್ಪ, ವಿವಿಧ ಇಲಾಖೆ ಅಧಿಕಾರಿಗಳು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರಿದ್ದರು.