ಪರಶುರಾಮಪುರ: ರಾಜಕಾರಣಿಗಳಿಗೆ ಜನಪರ ಕಾಳಜಿ, ಅಭಿವೃದ್ಧಿಪರ ಚಿಂತನೆ ಅಗತ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಸಮೀಪದ ಚೌಳೂರು ಗ್ರಾಮದಲ್ಲಿ ಈಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಗ್ರಾಪಂ, ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ತುಂಗಭದ್ರಾ ಹಿನ್ನೀರು ಯೋಜನೆ, ಇಂಜಿನಿಯರಿಂಗ್ ಕಾಲೇಜು, ಮಿನಿ ವಿಧಾನಸೌಧ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ವಿಶಾಲ ರಸ್ತೆಗಳು, ಗ್ರಾಮೀಣ ಕೂಡು ರಸ್ತೆಗಳು ಹಾಗೂ ವಿವಿಧ ಸಮುದಾಯದವರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.
ನಾನು ಕೀಳುಮಟ್ಟದ ರಾಜಕಾರಣಿಯಾಗಿದ್ದರೆ ಕ್ಷೇತ್ರದ ಜನ ನನ್ನನ್ನು ಮರು ಆಯ್ಕೆ ಮಾಡುತ್ತಿರಲಿಲ್ಲ. ಚಳ್ಳಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಇದನ್ನು ಸಹಿಸಿಕೊಳ್ಳಲು ಆಗದವರು ಅನಗತ್ಯ ಗೊಂದಲ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ವೇದಾವತಿ ನದಿಗೆ ವಿವಿ ಸಾಗರದಿಂದ ನೀರು ಬಿಡಿಸುವ ಸಲುವಾಗಿ ಈಗಾಗಲೇ ಸರ್ಕಾರ ಮತ್ತು ಜಿಲ್ಲಾಧಿಕಾರಿ ಜತೆ ಚರ್ಚೆ ನಡೆಸಿದ್ದು, ನೀರು ಹರಿಯುವುದು ಖಚಿತ ಎಂದರು.
ತಾಪಂ ಸದಸ್ಯ ಸಮರ್ಥರಾಯ ಮಾತನಾಡಿ, ಚಳ್ಳಕೆರೆ ತಾಲೂಕಿನ ಇತಿಹಾಸದಲ್ಲೇ ಸರ್ವ ಜನರ ಅಭಿವೃದ್ಧಿ, ತಾಲೂಕಿನ ಸಮಗ್ರ ಚಿತ್ರವನ್ನೇ ಬದಲಿಸಿದ ಕೀರ್ತಿ ಶಾಸಕರಿಗೆ ಸಲ್ಲುತ್ತದೆ ಎಂದು ಹೇಳಿದರು.
ಚೌಳೂರು ಬಸವರಾಜು, ಪ್ರಕಾಶ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ದುರುಗಮ್ಮ, ಪಿ.ಬಂಡೆ ಗ್ರಾಪಂ ಅಧ್ಯಕ್ಷ ಬೊಮ್ಮಲಿಂಗಪ್ಪ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಮಾಜಿ ಅಧ್ಯಕ್ಷರಾದ ಜಿ.ವೀರೇಶ, ಟಿ.ಭೂತಲಿಂಗಪ್ಪ ಸದಸ್ಯರಾದ ಸಮರ್ಥರಾಯ, ಉಮಾ ಜನಾರ್ಧನ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಚನ್ನಕೇಶವ, ಗ್ರಾಪಂ ಸದಸ್ಯರಾದ ಲೀಲಾವತಿ, ರತ್ಮಮ್ಮ, ವಿಜಯಕುಮಾರ, ಕಲಿವೀರಪ್ಪ, ಸುಧಾ ಇದ್ದರು.