ಪರಶುರಾಮಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸರ್ವ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದು ಚಳ್ಳಕೆರೆ ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜನಮಂಗಳ ಯೋಜನೆ, ಸ್ಥಳೀಯ ಆಡಳಿತ ಹಾಗೂ ಪ್ರಗತಿಬಂಧು ಮಹಿಳಾ ಸ್ವ-ಸಹಾಯ ಸಂಘದಿಂದ ಸಮೀಪದ ದೊಡ್ಡಚೆಲ್ಲೂರು ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಪಂ ವ್ಯಾಪ್ತಿಯ ಅಂಗವಿಕಲರಿಗೆ ಸಾಧನಾ-ಸಲಕರಣೆ ವಿತರಿಸಿ ಮಾತನಾಡಿದರು.
ಬಯಲು ಸೀಮೆಯ ರೈತರು, ಕೃಷಿ ಕಾರ್ಮಿಕರು ಹಾಗೂ ಮಹಿಳೆಯನ್ನು ಸಂಘಟಿಸಿ ಸ್ವ-ಸಹಾಯ ಸಂಘಗಳ ಮೂಲಕ ಸಾಲ-ಸೌಲಭ್ಯ ನೀಡಿ ಅವರ ಅಭ್ಯುದಯಕ್ಕೆ ಕಾರಣವಾಗಿದೆ ಎಂದರು.
ಪರಶುರಾಮಪುರ ವಲಯದ ಮೇಲ್ವಿಚಾರಕ ಬಿನೋಯ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯಿಂದ ಆರು ಅಂಗವಿಕಲರಿಗೆ ವೀಲ್‌ಚೇರ್, ಮೂವರಿಗೆ 3 ಲೆಗ್ ವಾಕಿಂಗ್ ಸ್ಟಿಕ್, ಎಲ್ಬೋ ಕ್ರಚಸ್, ಎರಡು ವಾಟರ್ ಬೆಡ್, ಮತ್ತಿತರ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷ ಎಲ್.ಸುರೇಶ, ಸದಸ್ಯರಾದ ಶ್ರೀದೇವಿ, ಆನಂದಪ್ಪ, ಒಕ್ಕೂಟದ ಅಧ್ಯಕ್ಷ ಮಂಜುನಾಥ, ಮುಖಂಡರಾದ ರಾಮೇಗೌಡ, ಜಯಣ್ಣ, ನಾಗರಾಜು, ಪುರಂದರ, ತಿಮ್ಮಣ್ಣ ಮತ್ತಿತರರಿದ್ದರು.