ಮೇಲುಕೋಟೆ: ಕನಗೋನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಸಿ.ಪರಮೇಶ್‌ಗೌಡ ಹಾಗೂ ಉಪಾಧ್ಯಕ್ಷರಾಗಿ ತಿಮ್ಮೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 11 ನಿರ್ದೇಶಕರಿರುವ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಕೆ.ಸಿ.ಪರಮೇಶ್‌ಗೌಡ ಹಾಗೂ ತಿಮ್ಮೇಗೌಡ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು. ಈ ಮೂಲಕ ಅಧ್ಯಕ್ಷರಾಗಿ 2ನೇ ಬಾರಿಗೆ ಕೆ.ಸಿ.ಪರಮೇಶ್‌ಗೌಡ ಆಯ್ಕೆಯಾಗಿದ್ದಾರೆ.
ಕೆ.ಸಿ.ಪರಮೇಶ್ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಡೇರಿಯನ್ನು ಅಭಿವೃದ್ಧಿಗೊಳಿಸುವ ಮೂಲಕ ಮಾದರಿಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಂಘದ ಷೇರುದಾರರಿಗೆ ಕಾಲಕಾಲಕ್ಕೆ ಬೋನಸ್, ಸಾಲ ವಿತರಣೆ ಮಾಡುವ ಜತೆಗೆ 15 ದಿನಕ್ಕೊಮ್ಮೆ ಹಾಲು ಹಾಕಿದ ಹಣವನ್ನು ನೀಡಲಾಗುವುದು. ಮಾಜಿ ಅಧ್ಯಕ್ಷ ಶಿವಲಿಂಗೇಗೌಡ ಡೇರಿ ಕಟ್ಟಡ ನಿರ್ಮಾಣ ಮಾಡಿಸಿದ್ದರು. ಮುಂದಿನ ದಿನಗಳಲ್ಲಿ ಡೇರಿ ಮೇಲಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
ನಿರ್ದೇಶಕರಾದ ರಾಮಸ್ವಾಮಿ, ಕೆ.ಎಲ್.ಹನುಮಂತೇಗೌಡ, ರಮೇಶ್, ಕೆ.ಎಸ್.ರಾಮಲಿಂಗೇಗೌಡ, ಮಂಗಳಾ, ಮಂಜುಳಾ, ಸರೋಜಮ್ಮ, ವಿಜಯಕುಮಾರ್, ಕಾರ್ಯದರ್ಶಿ ಕುಮಾರ, ಹಾಲು ಪರೀಕ್ಷಕ ಸಿಂಗ್ರೀಗೌಡ, ಸಿಬ್ಬಂದಿ ಇತರರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.