ಜಿಲ್ಲೆ

ಸೂರ್ಯನ ತೇಜಸ್ಸಿಗೆ ಪರಮಾತ್ಮ ಕಾರಣ

Chitradurga

ಚಿತ್ರದುರ್ಗ: ಆಕಾಶದಲ್ಲಿ ಸೂರ್ಯ ರಾರಾಜಿಸುತ್ತಾನೆ. ಯಾರಿಗೂ ಭೇದ ಮಾಡದೆ ವಿಶ್ವಕ್ಕೆ ಬೆಳಕು ಕೊಡುವ ಈತನ ಉದಯಕ್ಕೆ ವಿಳಂಬವಿಲ್ಲ. ಇದು ದೈವ ಸಂಕಲ್ಪದಂತೆ ನಡೆಯುತ್ತಿದೆ ಎಂದು ಉಡುಪಿಯ ಪಲಿಮಾರು ಮಠಾಧೀಶ ಡಾ. ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದರು.

ಹರಿವಾಯು ಗುರು ಸೇವಾ ಟ್ರಸ್ಟ್‌ನಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಹರಿವಾಯುಸ್ತುತಿ ಪಾರಾಯಣ, ರಾಯರ ವರ್ಧಂತಿ ಮಹೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಹರಿದಾಸ ಹಬ್ಬ, ಗುರು ರಾಘವೇಂದ್ರ ಸ್ವಾಮಿಯ 30ನೇ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮದ ನೇತೃತ್ವವಹಿಸಿ ಆಶೀರ್ವಚನ ನೀಡಿದರು.

ಪರಮಾತ್ಮ ಸದಾ ಲಾವಣ್ಯ ಸ್ವರೂಪಿ.

ಆತನ ಮೂರ್ತಿಯಲ್ಲಿ ತೇಜಸ್ಸು ಇದೆ. ಅದನ್ನು ನಮ್ಮ ಮಂತ್ರಾಲಯದ ರಾಯರಲ್ಲೂ ಕಾಣಬಹುದು. ಸಂಕಷ್ಟದಲ್ಲಿರುವ ಭಕ್ತರ ಸಮಸ್ಯೆ ಪರಿಹರಿಸುವ ಸಲುವಾಗಿ ಶ್ರೀನಿವಾಸ ದೇವರು ಧರೆಗೆ ರಾಯರನ್ನು ಕಳುಹಿಸಿದ ಕರುಣಾಮಯಿ ಎಂದು ಹೇಳಿದರು.

ನಾವಿದ್ದಲ್ಲಿಯೇ ರಾಯರನ್ನು ನನೆಯುವುದರಿಂದ ಪ್ರೀತಿ, ವಾತ್ಸಲ್ಯ, ಮಮಕಾರದಿಂದ ರಕ್ಷಿಸುವನು. ಜ್ಞಾನ, ಆರೋಗ್ಯ, ಸಮೃದ್ಧಿ ದಯಪಾಲಿಸುವನು. ಕೋಟೆನಾಡಿನ ಭಕ್ತಗಣ ಆತನ ನಾಮಸ್ಮರಣೆಯಲ್ಲಿ ಮಿಂದೇಳುವ ಮೂಲಕ ಕೃಪೆಗೆ ಪಾತ್ರರಾಗಬೇಕು. ಎಲ್ಲರಿಗೂ ಭಗವಂತ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.

ವಿಶೇಷಾಲಂಕಾರ ಸೇವೆ

ಶ್ರೀಗುರುರಾಜರ ಸನ್ಯಾಸ ಸ್ವೀಕಾರ, ಪಟ್ಟಾಭಿಷೇಕ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಬೆಳಗ್ಗೆ ಅದ್ದೂರಿಯಾಗಿ ನೆರವೇರಿತು. ವಿವಿಧ ಬಗೆಯ ಪುಷ್ಪಗಳಿಂದ ಶ್ರೀನಿವಾಸ ದೇವರು, ರಾಯರ ಮೂರ್ತಿಗೆ ವಿಶೇಷಾಲಂಕಾರ ಸೇವೆ ನಡೆಯಿತು.

ಮೈಸೂರಿನ ಡಾ. ಶ್ರೀನಿವಾಸಮೂರ್ತಿ ಆಚಾರ್ಯ, ಬೆಂಗಳೂರಿನ ಬದರಿನಾಥ ಆಚಾರ್ಯ, ವಿಷ್ಣುತೀರ್ಥಾಚಾರ್ಯ ಕಶ್ಯಪ, ವಿದ್ವಾನ್ ಕೆ.ಅಪ್ಪಣ್ಣಾಚಾರ್ಯ, ವೇದವ್ಯಾಸಾಚಾರ್ಯ, ಬ್ರಾಹ್ಮಣ ಸಂಘದ ಅಧ್ಯಕ್ಷ ಮಂಜುನಾಥ್, ಬಡಗನಾಡು ಸಂಘದ ಶೇಷಗಿರಿ, ಮುಖಂಡರಾದ ಜಗದೀಶ್, ಕಟೀಲ್ ದಿವಾಕರ್, ಟ್ರಸ್ಟ್‌ನ ಅಧ್ಯಕ್ಷ ಟಿ.ಕೆ.ನಾಗರಾಜರಾವ್ ಇತರರಿದ್ದರು.

*ಕೋಟ್

ರಾಯರು ಬೃಂದಾವನದಲ್ಲಿ 713 ಸಾಲಿಗ್ರಾಮಗಳನ್ನು ತರಿಸಿ 48 ದಿನ ಪೂಜೆ ಮಾಡಿದ್ದಾರೆ. ಸ್ವಾಮಿಯೂ ಎಲ್ಲೆಡೆ ಇದ್ದಾನೆ, ಸರ್ವರಲ್ಲೂ ನೆಲೆಸಿದ್ದಾನೆ. ನೂರಾರು ರೂಪದಲ್ಲಿರುವ ಭಗವಂತನಿಗೂ ವೈಕುಂಠದಲ್ಲಿರುವ ಶ್ರೀನಿವಾಸನಿಗೂ ವ್ಯತ್ಯಾಸವಿಲ್ಲ. ರಾಘವೇಂದ್ರ ಸ್ವಾಮಿಯ ಆರಾಧನೆಯಿಂದ ಜೀವನ ಪಾವನವಾಗಲಿದೆ.

ಡಾ. ಶ್ರೀನಿವಾಸಮೂರ್ತಿ ಆಚಾರ್ಯ, ಮೈಸೂರು

ವೈಭವಕ್ಕೆ ಸಾಕ್ಷಿಯಾದ ಶೋಭಾಯಾತ್ರೆ

ಶ್ರೀನಿವಾಸ ದೇವರು, ಶ್ರೀರಾಘವೇಂದ್ರ ಸ್ವಾಮಿ ಹಾಗೂ ದಾಸವರೇಣ್ಯರ ಭಾವಚಿತ್ರಗಳ ಶೋಭಾಯಾತ್ರೆ ನಗರದ ರಾಜಬೀದಿಗಳಲ್ಲಿ ವೈಭವದಿಂದ ನಡೆಯಿತು. ಆನೆಬಾಗಿಲು ಸಮೀಪದ ಸುವೃಷ್ಟಿ ಪ್ರಾಣದೇವರ ಸನ್ನಿಧಾನದಿಂದ ಮಂಗಳವಾದ್ಯಗಳೊಂದಿಗೆ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ನಂತರ ಗಾಂಧಿ ವೃತ್ತ, ಎಸ್‌ಬಿಐ ಬ್ಯಾಂಕ್, ಪ್ರವಾಸಿ ಮಂದಿರ, ವಾಸವಿ ವೃತ್ತ ಮಾರ್ಗವಾಗಿ ಸಂಚರಿಸಿ ಗಾಯತ್ರಿ ಕಲ್ಯಾಣ ಮಂಟಪ ತಲುಪಿತು. ಅನೇಕ ಭಕ್ತರು ಕುಣಿಯುತ್ತ, ಸ್ವಾಮಿಯನ್ನು ಸ್ಮರಿಸುತ್ತ, ಮೈಮರೆತು ದೈವಾರಾಧನೆಯಲ್ಲಿ ತೊಡಗಿದ್ದರು. ಚಳ್ಳಕೆರೆಯ ಗಾಯತ್ರಿ ವಿಪ್ರ ಭಜನಾ ಮಂಡಳಿ, ಚಿತ್ರದುರ್ಗದ ವಾರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.