ಜಿಲ್ಲೆ

ಶ್ರೀ ವಾಗ್ದೇವಿ ಹೋಮದಲ್ಲಿ ಪರಂ ಭಾಗಿ

ತುಮಕೂರು ಡೆಸ್ಕ್

ಲಘು ಪೂರ್ಣಾಹುತಿ, ಅಷ್ಟಾವಧಾನ ಸೇವೆ, ವಿಶೇಷ ಪೂಜೆ | ಬ್ರಹ್ಮಚಾರಿಣಿ ಅಲಂಕೃತ ಚಾಮುಂಡೇಶ್ವರಿ ದರ್ಶನ

ವಿಜಯವಾಣಿ ಸುದ್ದಿಜಾಲ ತುಮಕೂರು
ದಸರಾ ಉತ್ಸವದ ಎರಡನೇ ದಿನವಾದ ಶುಕ್ರವಾರ ಇಡೀ ದಿನ ವರುಣರಾಯ ಕಾಡಿದೆ. ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿ ಸಮ್ಮುಖದಲ್ಲಿ ನಡೆದ ಶ್ರೀ ವಾಗ್ದೇವಿ ಹೋಮಹವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಪತ್ನಿ ಕನ್ನಿಕಾ ಪರಮೇಶ್ವರಿ ಜತೆ ಭಾಗಿಯಾಗಿ ಪೂಜೆ ಸಲ್ಲಿಸಿದರು.


ಮಾತೆ ದುರ್ಗೆಯ ಎರಡನೇ ಸ್ವರೂಪವಾದ ಬ್ರಹ್ಮಚಾರಿಣಿ ಅಲಂಕೃತ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಸಚಿವ ಪರಮೇಶ್ವರ, ಲಘು ಪೂರ್ಣಾಹುತಿ, ಅಷ್ಟಾವಧಾನ ಸೇವೆ, ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗುವ ಅಮರ ಶಿಲ್ಪಿ ಜಕಣಾಚಾರಿ ಮುಖ್ಯ ವೇದಿಕೆಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಉಪವಿಭಾಗಾಧಿಕಾರಿ ಗೌರವ್​ ಕುಮಾರ್​ ಶೆಟ್ಟಿ, ತುಮಕೂರು ವಿವಿಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಮುಜರಾಯಿ ತಹಸೀಲ್ದಾರ್​ ಸವಿತಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತ್ಯಾಗರಾಜ್​, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್​ ಕು.ಮಿರ್ಜಿ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಪಶ್ಚಾರಿಣೀ ಸ್ವರೂಪಿ
ನವರಾತ್ರಿಯ 2ನೇ ದಿನ ದೇವಿ ದುರ್ಗೆಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಗುತ್ತದೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್​ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂದಿದೆ. ಕೈಯಲ್ಲಿ ಗುಲಾಬಿ ಧರಿಸಿರುವ ದೇವಿಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಪ್ರಗತಿಯ ಸಂಕೇತವಾಗಿರುವ ಹಸಿರು ವಸ್ತ್ರವನ್ನು ಧರಿಸಿ ದೇವಿಯನ್ನು ಪೂಜಿಸಿದಲ್ಲಿ ಸುಖ, ಶಾಂತಿ, ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಶನಿವಾರ ಮೀನಾ ಅಲಂಕಾರ ಮತ್ತು ಧಾರ್ಮಿಕ ಪೂಜೆ ಆಚರಣೆಗಳು ನಡೆಯಲಿವೆ.