ಕಂಪ್ಲಿ: ಪಟ್ಟಣ ಸೇರಿ ತಾಲೂಕಾದ್ಯಂತ ಮುಸ್ಲಿಮರು ಬಕ್ರೀದ್ ಅನ್ನು ಸೋಮವಾರ ಆಚರಿಸಿದರು.
ಪಟ್ಟಣದ ಮುದ್ದಾಪುರ ರಸ್ತೆಯ ವಿಜಯನಗರ ಕಾಲುವೆ ದಡದ ಖದೀಂ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಮುಸ್ಲಿಂ ಧರ್ಮಗುರು ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂ ಸಾಹೇಬ್ ಸಜ್ಜಾದೆ ನಶೀನ್ (ಪೀಠಾಧಿಪತಿ)ದಿವಾನಖಾನೆ ಮಾತನಾಡಿ, ಬಕ್ರೀದ್ ತ್ಯಾಗ, ಬಲಿದಾನದ ಸಂಕೇತವಾದ ಹಬ್ಬವಾಗಿದ್ದು, ಸರ್ವ ಧರ್ಮೀಯರು ಒಟ್ಟಾಗಿ ಪರಧರ್ಮ ಸಹಿಷ್ಣುಗಳಾಗಿ, ಪರಸ್ಪರ ಭಾವೈಕ್ಯದಿಂದ ಶಾಂತಿಪ್ರೇಮಿಗಳಾಗಿ ಜೀವಿಸಬೇಕು ಎಂದರು.
ಎಲ್ಲ ಮಸೀದಿಗಳ ಮುತುವಲ್ಲಿಗಳು, ಈದ್ಗಾ ಕಮಿಟಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ಹೊಸಪೇಟೆ ಬೈಪಾಸ್ ರಸ್ತೆಯ ಇದ್ಗಾ ಮೈದಾನದಲ್ಲಿಯೂ ಸಾಮೂಹಿಕ ಪ್ರಾರ್ಥನೆ ಜರುಗಿತು. ಸಿರಾಜ್ ಹಾಫಿಸಾಬ್, ಹಾಜಿ ಜಿಯಾವುದ್ದೀನ್ ಸೇರಿ ಕಂಪ್ಲಿ ಕೋಟೆಯ ಮಸೀದಿಗಳ ಮುತುವಲ್ಲಿಗಳು, ಈದ್ಗಾ ಕಮಿಟಿಯ ಪದಾಧಿಕಾರಿಗಳು, ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದರು.
ಪಟ್ಟಣದ ಎರಡು ಈದ್ಗಾ ಮೈದಾನ ಹಾಗೂ ಎಮ್ಮಿಗನೂರು ಈದ್ಗಾ ಮೈದಾನಗಳಲ್ಲಿನ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಶಾಸಕ ಜೆ.ಎನ್.ಗಣೇಶ್ ಪಾಲ್ಗೊಂಡು ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.