ಜಿಲ್ಲೆ

ಗಾಂಜಾ ಆರೋಪಿಗಳ ಪರೇಡ್, ಮಾದಕವಸ್ತು ಪ್ರಕರಣಗಳ ಆರೋಪಿಗಳಿಗೆ ಜಿಲ್ಲಾ ಪೊಲೀಸರ ಡ್ರಿಲ್ ರವಿ ಡಿ.ಚನ್ನಣ್ಣನವರ್ ಸೂಚನೆ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಗ್ರಾಮಾಂತರ ಜಿಲ್ಲೆಯಲ್ಲಿ ಮಾದಕವಸ್ತು ವಹಿವಾಟಿಗೆ ಕಡಿವಾಣ ವಾಕುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಪೊಲೀಸರು ‘ಗಾಂಜಾ ರೌಡಿ ಪರೇಡ್’ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಸ್ಯಾಂಡಲ್‌ವುಡ್ ತಾರೆಯರ ಹೆಸರು ಡ್ರಗ್ಸ್ ಜಾಲದಲ್ಲಿ ಸಿಲುಕುತ್ತಿದ್ದಂತೆ ಜಿಲ್ಲೆಯಲ್ಲೂ ಮಾದಕವಸ್ತುಗಳ ಅಮಲು ಏರಿಸಿಕೊಳ್ಳುವವರ ಪತ್ತೆಗೆ ಪೊಲೀಸರು ವಿಶೇಷ ಬಲೆ ಹೆಣೆದಿದ್ದಾರೆ.

ಜಿಲ್ಲೆಯ ನಾಲ್ಕೂ ದಿಕ್ಕುಗಳಿಂದ ಮಾದಕವಸ್ತು ಪ್ರವೇಶ ಪಡೆಯುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿರುವ ಪೊಲೀಸರು ‘ಗಾಂಜಾ ಪ್ರಕರಣಗಳ ಹಳೇ ಆರೋಪಿಗಳ’ ಕಾರ್ಯಾಚರಣೆಗೆ ಯೋಜನೆ ರೂಪಿಸಿದ್ದಾರೆ.

10 ವರ್ಷದ ಲಿಸ್ಟ್ ಸಿದ್ಧ: ಜಿಲ್ಲೆಯಲ್ಲಿ 10 ವರ್ಷದಿಂದ ಮಾದಕವಸ್ತುಗಳ ಸಂಬಂಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಹೊಸಕೋಟೆ ಡಿವೈಎಸ್‌ಪಿ ಬಿ.ಎನ್.ಸಕ್ರಿ ಮತ್ತಿತರ ಹಿರಿಯ ಪೊಲೀಸರ ತಂಡ ರಚನೆಯಾಗಿದೆ. 10 ವರ್ಷದಿಂದ ಇದುವರೆಗೆ ಜಿಲ್ಲೆಯಲ್ಲಿ ಎಷ್ಟು ಪ್ರಕರಣ ದಾಖಲಾಗಿವೆ. ಎಷ್ಟು ಆರೋಪಿಗಳ ಬಂಧನವಾಗಿದೆ. ಎಷ್ಟು ಮಂದಿಗೆ ಶಿಕ್ಷೆಯಾಗಿದೆ. ಎಷ್ಟು ಮಂದಿ ಜಾಮೀನಿನ ಮೇಲೆ ಹೊರಗಿದ್ದಾರೆ. ಎಷ್ಟು ಮಂದಿ ಪೊಲೀಸರ ಕಣ್ಣಳತೆಯಲ್ಲಿದ್ದಾರೆ. ಕ್ರಿಮಿನಲ್ ಚಟುವಟಿಕೆಯಿಂದ ದೂರವುಳಿದಿದ್ದಾರೆಯೇ, ಮತ್ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಪ್ರಕರಣ ದಾಖಲಾಗಿದೆಯೇ ಮತ್ತಿತರ ವಿವರ ಕಲೆ ಹಾಕಲು ಎಸ್‌ಪಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಾರದಿಂದೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ರಾಜ್ಯದ ಅನೇಕ ನಟ-ನಟಿಯರು, ರಾಜಕಾರಣಿಗಳು, ಉದ್ದಿಮೆದಾರರು ಹಾಗೂ ಪ್ರಭಾವಿಗಳ ಹೆಸರು ತಳಕುಹಾಕಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಬಹಳಷ್ಟು ಪ್ರಮುಖರ ಒಡೆತನದ ಾರ್ಮ್‌ಹೌಸ್, ರೆಸಾರ್ಟ್, ಕ್ಲಬ್, ಬಾರ್‌ಗಳಿರುವುದು ಕಂಡುಬಂದಿದ್ದು, ಜಿಲ್ಲಾ ಪೊಲೀಸರು ಮತ್ತಷ್ಟು ಅಲರ್ಟ್ ಆಗಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ: ಅಂತಾರಾಜ್ಯ ಗಡಿಭಾಗಗಳಲ್ಲಿ ವಾಹನಗಳ ತಪಾಸಣೆ ಚುರುಕುಗೊಳಿಸಲಾಗಿದೆ. ಟೋಲ್‌ಗಳ ಸಿಸಿ ಟಿವಿಗಳಿಂದ ಕೆಲವೊಂದು ಮಹತ್ವದ ದಾಖಲೆ ಪಡೆಯಲಾಗುತ್ತಿದೆ. ಗಡಿಭಾಗದಲ್ಲಿ ಪ್ರತಿದಿನ ತಪಾಸಣೆಗೆ ತಲಾ ಒಂದೊಂದು ತಂಡ ನಿಯೋಜನೆಗೊಂಡಿದೆ. ಕಳ್ಳ ಮಾರ್ಗಗಳ ಮೂಲಕ ಜಿಲ್ಲೆ ಪ್ರವೇಶಿಸುವ ವಾಹನಗಳ ಮೇಲೆ ನಿಗಾವಹಿಸಲು ಪ್ರತಿದಿನ ಬೇರೆ ಬೇರೆ ಸ್ಥಳ ಬದಲಾಯಿಸುವ ಸಂಚಾರ ಸ್ಕಾೃಡ್ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕುವಾರು ಪರೇಡ್: ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಪ್ರತಿದಿನ ಒಂದೊಂದು ತಾಲೂಕಿನ ಎಲ್ಲ ಠಾಣಾ ವ್ಯಾಪ್ತಿಯ ಮಾದಕವಸ್ತು ಪ್ರಕರಣದ ಆರೋಪಿಗಳ ಪರೇಡ್ ನಡೆಸಲು ಸುತ್ತೋಲೆ ಹೊರಡಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಕರೊನಾ ನಿಯಮ ಪಾಲನೆಯಡಿ ಎಲ್ಲರಿಗೂ ಪರೇಡ್ ನಡೆಸಬೇಕು. ಅಗತ್ಯ ಮಾಹಿತಿ ಸಂಗ್ರಹದೊಂದಿಗೆ ಖಡಕ್ ಎಚ್ಚರಿಕೆ ರವಾನಿಸುವಂತೆ ಎಸ್ಪಿ ಸೂಚನೆ ನೀಡಿದ್ದಾರೆ.

ಮಾದಕವಸ್ತು ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗಾಂಜಾ ಆರೋಪಿಗಳ ಪರೇಡ್ ನಡೆಸಲು ಎಲ್ಲ ಠಾಣೆಗಳಿಗೂ ಸೂಚನೆ ನೀಡಲಾಗಿದೆ. 10 ವರ್ಷದಿಂದ ಮಾದಕವಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಪಟ್ಟಿ ತಯಾರಿಸಲಾಗುತ್ತಿದ್ದು, ಪ್ರತಿಯೊಬ್ಬರ ಮಾಹಿತಿ ಪಡೆದು ತನಿಖೆ ನಡೆಸಲು ವಿಶೇಷ ಕಾರ್ಯಾಚರಣೆ ರೂಪಿಸಲಾಗಿದೆ. ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ